ಮೈಸೂರು: 2 ವರ್ಷಗಳಿಂದಲೂ ಜೆಡಿಎಸ್ನಿಂದ ದೂರವಿದ್ದ ಶಾಸಕ ಜಿ. ಟಿ ದೇವೇಗೌಡ ಅವರೊಂದಿಗೆ ಶಾಸಕ ಸಾ. ರಾ ಮಹೇಶ್ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದು ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದ್ದು, ಜಿ. ಟಿ ದೇವೇಗೌಡ ಅವರನ್ನು ಜೆಡಿಎಸ್ನಲ್ಲೇ ಉಳಿಸಿಕೊಳ್ಳುವ ಮೊದಲ ಪ್ರಯತ್ನ ಎನ್ನಲಾಗಿದೆ. ಹಾಗಾದರೆ, ಈ ಭೇಟಿ ಏನೆಲ್ಲಾ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎಂಬುದನ್ನು ನೋಡೋಣ..
ಸಮ್ಮಿಶ್ರ ಸರ್ಕಾರದ ಪತನದ ನಂತರ ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ಜಿಲ್ಲೆಯಲ್ಲಿ ಜೆಡಿಎಸ್ನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದವರನ್ನು ಸೇರುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಜೊತೆಗೆ ಶಾಸಕ ಸಾ. ರಾ ಮಹೇಶ್ ನಡವಳಿಕೆಯಿಂದಲೂ ಸಹ ಜಿಟಿಡಿ ಬೇಸರಗೊಂಡಿದ್ದು, ಹಲವಾರು ಬಾರಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಶಾಸಕ ಸಾ. ರಾ ಮಹೇಶ್ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ನ ನಾಯಕತ್ವ ವಹಿಸಿದ್ದು, ಜಿಟಿಡಿ ಕೋಪಕ್ಕೆ ಕಾರಣವಾಗಿತ್ತು.
ನಿನ್ನೆ ಜಿಟಿಡಿ - ಸಾರಾ ಗೌಪ್ಯ ಮಾತುಕತೆ:ವರಿಷ್ಠರ ಸೂಚನೆ ಮೇರೆಗೆ ಶಾಸಕ ಸಾ. ರಾ ಮಹೇಶ್ ಭಾನುವಾರ ಜಲದರ್ಶಿನಿಯಲ್ಲಿರುವ ಶಾಸಕ ಜಿ. ಟಿ ದೇವೇಗೌಡರ ಕಚೇರಿಗೆ ಆಗಮಿಸಿ ಇದೇ ತಿಂಗಳ 31 ರಂದು ಕೆ. ಆರ್ ನಗರದಲ್ಲಿ ನಡೆಯುವ ಕೆಂಪೇಗೌಡ ಜಯಂತಿಗೆ ಆಹ್ವಾನ ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲಿದ್ದು, ಆ ವೇದಿಕೆಯಲ್ಲಿ ಶಾಸಕ ಜಿಟಿಡಿ ಮುನಿಸು ವರಿಷ್ಠರ ನೇತೃತ್ವದಲ್ಲಿ ಶಮನ ಮಾಡಿ ಮುಂದಿನ ಚುನಾವಣೆಗೆ ಸಜ್ಜಾಗಲು ತಂತ್ರ ರೂಪಿಸಲಾಗಿದೆ.