ಮೈಸೂರು: ನಟನೆ ಮಾಡೋದನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದಲೇ ಕಲಿಯಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿರುಗೇಟು ನೀಡಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ರೋಗ ಇರುವವರನ್ನ ಪತ್ತೆ ಹಚ್ಚಬಹುದು ಆದರೆ ರೋಗ ಇರುವಂತೆ ನಟನೆ ಮಾಡುವವರನ್ನ ಪತ್ತೆ ಹಚ್ಚೋದು ಕಷ್ಟ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಪಕ್ಷ ಸಂಘಟನೆ ವಿಚಾರವಾಗಿ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಕೈ ಬಿಟ್ಟಿದ್ದಾರೆ. ಸಂಘಟನೆಯಲ್ಲಿ ನನಗೆ ವಯಸ್ಸಾಯ್ತು ಎಂದು ಕೈ ಬಿಟ್ಟಿರಬೇಕು. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯುತ್ತಿರಲಿಲ್ಲ. ಇನ್ನು ಇವಾಗ ನಡೆಯುತ್ತಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪಾಲಿಕೆ ಮೇಯರ್ ವಿಚಾರದಲ್ಲಿ ನನ್ನನ್ನ ಬಿಟ್ಟು ಸಭೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಹೇಳೋದೇ ಒಂದು ನಡೆದುಕೊಳ್ಳುವ ರೀತಿಯೇ ಒಂದು. ನಾನು ಜನತಾದಳದ ಶಾಸಕ, ಸಚಿವನಾಗಬೇಕು ಎಂಬ ಆಸೆ ಇದ್ದರೆ, ಹೆಚ್ ವಿಶ್ವನಾಥ್, ನಾರಾಯಣ ಗೌಡ ಪಕ್ಷ ಬಿಟ್ಟು ಹೋದಾಗಲೇ ನಾನು ಬಿಡಬಹುದಿತ್ತು. ಆದರೆ ಕುಮಾರಸ್ವಾಮಿಯನ್ನ ನಾನೇ ಮುಖ್ಯಮಂತ್ರಿ ಮಾಡಿ ನಾನೇ ಪದಚ್ಯುತಿ ಮಾಡ್ತೀನಾ..? ಆ ಕೆಲಸ ನಾನು ಮಾಡಿಲ್ಲ ಎಂದು ಜಿ ಟಿ ದೇವೇಗೌಡ ಪ್ರಶ್ನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದಿನ ತಾ.ಪಂ ಹಾಗೂ ಜಿ.ಪಂ ಚುನಾವಣೆಗೂ ಸ್ವತಃ ನಾನೇ ಬಿ. ಫಾರಂ ಕೊಡ್ತೀನಿ ಅಂತ ಹೆಚ್‌ಡಿಕೆ ಹೇಳಿದ್ದಾರೆ. ಹಾಗಾಗಿ ಅದರಲ್ಲೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿದರು.
ಓದಿ...ಪತ್ನಿ ಜತೆ ಜಗಳ.. ಮದ್ಯದ ಅಮಲಿನಲ್ಲಿ ಪತಿ ನೇಣಿಗೆ ಶರಣು - ಮೊಬೈಲ್ನಲ್ಲಿ ದೃಶ್ಯ ಸೆರೆ