ಮೈಸೂರು: ಹೆಚ್ ಡಿ ಕುಮಾರಸ್ವಾಮಿ ಅವರು ಜಿ ಟಿ ದೇವೇಗೌಡರ ಬೇರು ತೆಗೆಯುತ್ತಿಲ್ಲ. ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಜಿಟಿಡಿ ಆಕ್ರೋಶ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಜಿ ಟಿ ದೇವೇಗೌಡ ಆಕ್ರೋಶ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ. ಮಂಥರೆ, ರಾಮನ ಪಟ್ಟಾಭಿಷೇಕ ತಪ್ಪಿಸಿ ಕಾಡಿಗೆ ಕಳುಹಿಸಿದಳು. ಕುಮಾರಸ್ವಾಮಿ ಈ ನಾಟಕದಲ್ಲಿ ಹೇಳುವ ಪ್ರಸಂಗಗಳಂತೆ ನಡೆದುಕೊಳ್ಳಬೇಡಿ. ನೀವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅರ್ಥಪೂರ್ಣವಾಗಿ ತಿಳಿದುಕೊಳ್ಳಿ.
ಅವರು(ಸಾ.ರಾ.ಮಹೇಶ್)ಹೇಳಿದ್ದನ್ನೇ ಕಾಪಿ, ಜೆರಾಕ್ಸ್ ಹೊಡೆಯಲು ಹೋಗಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ. ಅದಕ್ಕೆ ಕುಂದು ತರುವ ಮಾತು ಆಡಿಲ್ಲ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಊರೂರಿಗೆ ಹೋಗಿ ಪ್ರಚಾರವನ್ನೂ ಮಾಡದೆ ಮನೆಯಲ್ಲಿ ಕುಳಿತಿದ್ದೇನೆ.
ನನ್ನನ್ನು ನಾನು ಎಲ್ಲಿಯೂ ಆಲದಮರ ಅಂತಾ ಕರೆದುಕೊಂಡಿಲ್ಲ. ಆದರೆ, ನನ್ನ ವಿರುದ್ಧ ನೀವು ತಾಲೂಕುಗಳಿಗೆ ಹೋಗಿ ಮಾತನಾಡಿದ್ದೀರಿ. ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಸಂಕಷ್ಟ ಕಾಲದಲ್ಲೂ ಜೆಡಿಎಸ್‌ನಲ್ಲೇ ಉಳಿದುಕೊಂಡರು. ಅವರ ಮಗನ ವಿರುದ್ಧ ನೀವು ಪ್ರಚಾರ ಮಾಡಿದ್ದೀರಿ. ಜೆಡಿಎಸ್ ಬದಲು ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೀರಿ ಎಂದು ಕಿಡಿ ಕಾರಿದ್ದಾರೆ.