ಮೈಸೂರು:ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ 'ಗೃಹ ಲಕ್ಷ್ಮೀ' ಯೋಜನೆಯಡಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಹಾಗೆಯೇ ನಾಡ ಅಧಿದೇವತೆ ಚಾಮುಂಡೇಶ್ವರಿಗೂ ಪ್ರತಿ ತಿಂಗಳು ₹2 ಸಾವಿರದಂತೆ 5 ವರ್ಷದ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂದಾಯ ಮಾಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ 59 ತಿಂಗಳ 1.80 ಲಕ್ಷ ರೂ ಹಣವನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ್ದಾರೆ. ಈ ಹಿಂದೆ ಯೋಜನೆಗೆ ಚಾಲನೆ ನೀಡುವ ಮುನ್ನ ಚಾಮುಂಡೇಶ್ವರಿಗೆ 2 ಸಾವಿರ ರೂ ಹಣ ಸಮರ್ಪಿಸಲಾಗಿತ್ತು. ಇದೀಗ 59 ತಿಂಗಳ ಹಣವನ್ನು ನೀಡಲಾಗಿದೆ.
ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದ ದಿನೇಶ್ ಗೂಳಿಗೌಡ:ಗೃಹ ಲಕ್ಷ್ಮೀ ಯೋಜನೆಯಡಿ ತಾಯಿ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2 ಸಾವಿರ ಹಣ ಅರ್ಪಿಸುವಂತೆ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವೈಯಕ್ತಿಕವಾಗಿ 1.80 ಲಕ್ಷ ಹಣವನ್ನು ನಾಡದೇವಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಯ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ಲಕ್ಷ್ಮೀ ಹೆಬ್ಬಾಳ್ಕರ್ ಪೋಸ್ಟ್: ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಐದು ವರ್ಷಗಳ ಕಂತನ್ನು ನನ್ನ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದರು. ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ಸಲ್ಲಿಸಿದ್ದೇನೆ. ಈಗಾಗಲೇ ಮೊದಲ ಕಂತನ್ನು ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸಲ್ಲಿಸಿದ್ದರು. ಇದೀಗ ಒಂದೇ ಸಲ ಎಲ್ಲಾ ಕಂತಿನ ಹಣವನ್ನು ನಾಡದೇವಿಗೆ ಅರ್ಪಿಸಲಾಗಿದೆ ಎಂದು ಎಕ್ಸ್ನಲ್ಲಿ ಸಚಿವೆ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಚಾಮುಂಡೇಶ್ವರಿ ತಾಯಿಗೆ ಐದು ವರ್ಷದ ಹಣ ಅರ್ಪಣೆ
ಈವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮೀ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂ. ಜಮಾ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆನ್ಲೈನ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಆಗಸ್ಟ್ 30 ಅಧಿಕೃತವಾಗಿ ಉದ್ಘಾಟಿಸಿದ್ದರು. ಆ ವೇಳೆ ಸಾಕೇಂತಿಕವಾಗಿ 10 ಮಂದಿ ಫಲಾನುಭವಿಗಳಿಗೆ 2 ಸಾವಿರ ರೂ ಚೆಕ್ ವಿತರಿಸಿ ಯೋಜನೆಗೆ ಚಾಲನೆ ನೀಡಲಾಗಿತ್ತು.