ಮೈಸೂರು:ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ನಗರದಲ್ಲಿ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆನ್ಲೈನ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಕೇಂತಿಕವಾಗಿ 10 ಮಂದಿ ಫಲಾನುಭವಿಗಳಿಗೆ ಚಕ್ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಸಾಂಕೇತಿಕವಾಗಿ ಇವರಿಗೆ ಕ್ಯೂ ಆರ್ ಕೋಡ್ ಇರುವ ಡಿಜಿಟಲ್ ಕಾರ್ಡ್ ವಿತರಣೆ ಸಹ ಮಾಡಲಾಯಿತು. ಎಲ್ಲ 1ಕೋಟಿ 10 ಲಕ್ಷ ಫಲಾನುಭವಿಗೆ ಈ ಡಿಜಿಟಲ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಮಹಿಳಾ ಮುಖ್ಯಸ್ಥರಿಗೆ 2 ಸಾವಿರ ರೂ. ಸಹಾಯಧನ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಶೇಕಡಾ 86ರಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. 1.28 ಕೋಟಿ ಕುಟುಂಬದ ಯಜಮಾನಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಜುಲೈ 19ರಿಂದ ಪ್ರಾರಂಭಗೊಂಡಿದೆ. ಈವರೆಗೆ 1.11 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಸಿಕೊಡಿದ್ದಾರೆ. ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗುತ್ತದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು 80 ಅಡಿ ಉದ್ದದ ಹಾಗೂ 60 ಅಡಿ ಅಗಲ, 8 ಅಡಿ ಎತ್ತರದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಸುಮಾರು 1 ಲಕ್ಷಕ್ಕೂ ಜನರು ಕಾರ್ಯಕ್ರಮ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವು ರಾಜ್ಯಾದ್ಯಂತ ಸುಮಾರು 12,600 ಕಡೆಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.