ಮೈಸೂರು:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡಿನ ಮಧುಮಲೈಗೆ ತೆರಳುವ ಹಿನ್ನೆಲೆಯಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಸಿ. ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪಾಲಿಕೆ ಮೇಯರ್ ಶಿವಕುಮಾರ್, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಈ ವೇಳೆ ಇದ್ದರು.
ಎರಡನೇ ಬಾರಿಗೆ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ: ಕಳೆದ ವರ್ಷ ದಸರಾ ಉದ್ಘಾಟನೆ ಮಾಡಲು ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ಬಾರಿ ಮಧುಮಲೈ ಜಿಲ್ಲೆಯ ಕಾರ್ಯಕ್ರಮಕ್ಕೆ ತೆರಳಲು ಮೈಸೂರಿಗೆ ಬಂದಿದ್ದರು. ರಾಷ್ಟ್ರಪತಿ ಅವರು ಮೈಸೂರಿಗೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು, ನಾನಾ ಇಲಾಖೆಗಳ ಅಧಿಕಾರಿಗಳಿಗೆ ರಾಷ್ಟ್ರಪತಿ ಆಗಮಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅನಾನುಕೂಲ ಆಗದಂತೆ ಶಿಷ್ಟಾಚಾರ ಪ್ರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಗೊಂದಲಕ್ಕೆ ಆಸ್ಪದ ಇಲ್ಲದಂತೆ ಇಲಾಖೆಗಳು ಸಮನ್ವಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಸೂಚನೆ ಕೊಟ್ಟಿದ್ದರು.