ಮೈಸೂರು:ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಕೆಲವು ಆದೇಶಗಳನ್ನು ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದರೆ ಛತ್ರ, ಸಮುದಾಯದ ಭವನಗಳ ಮಾಲೀಕರು, ಆಯೋಜಕರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಡಿಸಿಪಿ ಪ್ರಕಾಶ್ ಗೌಡ ಎಚ್ಚರಿಸಿದರು.
ಕೊರೊನಾ ನಿಯಂತ್ರಿಸುವ ಕುರಿತು ಛತ್ರ, ಸಮುದಾಯ ಭವನಗಳ ಮಾಲೀಕರ ಜೊತೆ ಡಿಸಿಪಿ ಪ್ರಕಾಶ್ ಗೌಡ ಸಭೆ ನಡೆಸಿದ್ದು, ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸಭಾಭವನದ ಒಟ್ಟು ಸಾಮರ್ಥ್ಯದ ಕನಿಷ್ಠ ಶೇ.50ರಷ್ಟು ಅಥವಾ ಗರಿಷ್ಠ 200 ಜನರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಭಾಗವಹಿಸುವವರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು. ಮತ್ತು ಕೈ ತೊಳೆಯಲು ಸಾಬೂನು ಅಥವಾ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದರು.
ಕಾರ್ಯಕ್ರಮ ನಡೆಯುವ ದಿನ ಮತ್ತು ಆಯೋಜಕರ ಸಂಪೂರ್ಣ ವಿವರವನ್ನು ಒಂದು ವಾರ ಮುಂಚಿತವಾಗಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು. ಊಟ ಬಡಿಸುವವರು, ಛಾಯಾಗ್ರಾಹಕರು, ಸ್ವಚ್ಛತಾ ಕಾರ್ಯನಿರ್ವಹಿಸುವವರು ತಪ್ಪದೇ ಮಾಸ್ಕ್ ಹಾಗೂ ಕೈಗವಸು ಹಾಕಿಕೊಳ್ಳಬೇಕು. ಮುಖ್ಯವಾಗಿ ಊಟದ ಹಾಲ್ಗಳಲ್ಲೂ ಸಾಮಾಜಿಕ ಅಂತರ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.