ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ತಂಡಕ್ಕೆ ಸರ್ಕಾರ 30 ಲಕ್ಷ ರೂ.ಗಳ ವಿಮೆ ಘೋಷಣೆ ಮಾಡಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ. ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ 8 ಆನೆಗಳಿಗೆ, ಮಾವುತರು, ಕಾವಾಡಿಗಳು ಸೇರಿ ಸಾರ್ವಜನಿಕ ಆಸ್ತಿ ಹಾನಿಯಾದರೆ ನಷ್ಟ ಭರಿಸಲು ಈ ರೀತಿಯಲ್ಲಿ ವಿಮೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 13ರಿಂದ ಗಜಪಯಣದ ಮೂಲಕ ಆಗಮಿಸಿರುವ ಆನೆಗಳಿಗೆ ಅಕ್ಟೋಬರ್ 24 ರವರೆಗೆ ಚಾಲ್ತಿಯಲ್ಲಿರುವಂತೆ 30 ಲಕ್ಷ ವಿಮೆಯನ್ನು ಮಾಡಿಸಲಾಗಿದೆ. ಗಂಡಾನೆಗಳಿಗೆ 3.50 ಲಕ್ಷ, ಹೆಣ್ಣಾನೆಗೆ 2.50 ಲಕ್ಷ ವಿಮೆ ಘೋಷಣೆ ಮಾಡಲಾಗಿದೆ
ಗಂಡಾನೆಗಳಾದ ಅಭಿಮನ್ಯು, ವಿಕ್ರಮ, ಧನಂಜಯ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ, ಹೆಣ್ಣಾನೆಗಳಾದ ಕಾವೇರಿ, ಚೈತ್ರಾ ಹಾಗೂ ಲಕ್ಷ್ಮಿಗೆ ವಿಮೆ ಮಾಡಿಲಾಗಿದೆ. ಇನ್ನು ಆನೆಗಳ ಜೊತೆ ಬಂದ 16 ಮಂದಿ ಮಾವುತರು ಹಾಗೂ ಕಾವಾಡಿಗಳಿಗೆ 1 ಲಕ್ಷ ರೂ ಮೌಲ್ಯದ ವಿಮೆ ಜೊತೆಗೆ ಆನೆಗಳಿಂದ ಸಾರ್ವಜನಿಕ ಆಸ್ತಿ ಹಾನಿಯಾದರೆ ನಷ್ಟ ಭರಿಸಲು 30 ಲಕ್ಷ ರೂ. ಮೌಲ್ಯದ ಮೂರನೇ ವ್ಯಕ್ತಿ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ನಾಳೆ ಅರಮನೆ ಪ್ರವೇಶ ಮಾಡಲಿರುವ ಗಜಪಡೆ:ನಾಳೆ ಬೆಳಗ್ಗೆ ಶುಭ ಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ 8 ಗಜಪಡೆ ಅರಮನೆ ಅಂಗಳವನ್ನು ಪ್ರವೇಶ ಮಾಡಲಿದೆ. ಅಲ್ಲಿ ಒಂದೆರಡು ದಿನ ವಿಶ್ರಾಂತಿ ಪಡೆದು ಸೆಪ್ಟೆಂಬರ್ 19 ರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಗಜಪಡೆಗೆ ವಿಶೇಷ ಆಹಾರ ನೀಡಲು ಟೆಂಡರ್ ಕರೆಯಲಾಗಿದ್ದು, ಅರಮನೆ ಆವರಣದಲ್ಲಿ ಆನೆಗಳಿಗೆ, ಮಾವುತರಿಗೆ ಹಾಗೂ ಕಾವಾಡಿಗಳಿಗೆ ಶೆಡ್ ನಿರ್ಮಿಸಲಾಗಿದೆ. ಜೊತೆಗೆ 8 ಆನೆಗಳು ಇರುವ ಕಡೆ ಸಿಸಿಟಿವಿ ಕ್ಯಾಮರಾ ಸಹ ಅಳವಡಿಸಲಾಗುತ್ತದೆ.