ಕರ್ನಾಟಕ

karnataka

ETV Bharat / state

ಮೈಸೂರು ದಸರಾ: ಅಂಬಾವಿಲಾಸ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ - ಸಿಂಹಾಸನ ಜೋಡಣೆ

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಅಂಬಾವಿಲಾಸ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.

mysuru dasara 2023
ರತ್ನ ಖಚಿತ ಸಿಂಹಾಸನ ಜೋಡಣೆ

By ETV Bharat Karnataka Team

Published : Oct 9, 2023, 12:53 PM IST

Updated : Oct 9, 2023, 7:05 PM IST

ಮೈಸೂರು :ರಾಜ ವಂಶಸ್ಥರ ಶರನ್ನವರಾತ್ರಿಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿಯಾಗಿ ಅರಮನೆಯ ಅಂಬಾವಿಲಾಸ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ನುರಿತ ಅರಮನೆಯ ಕೆಲಸಗಾರರಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಮಾಡಲಾಯಿತು.

ಅಕ್ಟೋಬರ್ 15 ರಿಂದ ಅಕ್ಟೋಬರ್ 24ರ ವರೆಗೆ ಅರಮನೆಯಲ್ಲಿ ರಾಜ ಪರಂಪರೆಯಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳನ್ನ ರಾಜ ಪರಂಪರೆಯಂತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶುಭ ಲಗ್ನದಲ್ಲಿ ಸಿಂಹಾಸನವನ್ನು ಅರಮನೆಯ ಅಂಬಾ ವಿಲಾಸ ದರ್ಬಾರ್ ಹಾಲ್​ನಲ್ಲಿ ಜೋಡಿಸಲಾಯಿತು.

ರತ್ನ ಖಚಿತ ಸಿಂಹಾಸನ ಜೋಡಣೆ

ಅದಕ್ಕೂ ಮುನ್ನ ಅರಮನೆಯ ಸ್ಟ್ರಾಂಗ್ ರೂಂನಲ್ಲಿ ಬಿಡಿಭಾಗಗಳಾಗಿ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ರಾಜಮಾತೆ ಪ್ರಮೋದಾ ದೇವಿ ಹಾಗೂ ಅರಮನೆಯ ಭದ್ರತಾ ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್ ಮಾಡಿದ ಬಾಗಿಲನ್ನು ತೆರೆದು ಸಿಂಹಾಸನದ ಭಾಗಗಳನ್ನು ದರ್ಬಾರ್ ಹಾಲ್​ಗೆ ತಂದರು. ಅಲ್ಲಿ ಸಿಂಹಾಸನ ಜೋಡಣೆಯನ್ನು ಅರಮನೆಯ ಸಿಬ್ಬಂದಿ ಹಾಗೂ ಪುರಾತನ ಕಾಲದಿಂದ ಸಿಂಹಾಸನ ಜೋಡಣೆ ಕೆಲಸವನ್ನು ಮಾಡುತ್ತಿರುವ ಗೆಜ್ಜಗಳ್ಳಿಯ ನುರಿತ ಕೆಲಸಗಾರರು ಸೇರಿ ಸಿಂಹಾಸ ಜೋಡಿಸಿದರು.

ಸಿಂಹಾಸನ ಜೋಡಣೆಗೂ ಮುನ್ನ ಪೂಜಾ ಕೈಂಕರ್ಯಗಳು : ಸಿಂಹಾಸನವನ್ನು ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್​ನಲ್ಲಿ ಜೋಡಣೆಗೂ ಮುನ್ನ ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಹೋಮ ಹಾಗೂ ಚಂಡಿಕಾ ಹೋಮವನ್ನು ನಡೆಸಿ ನಂತರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ಬಳಿಕ, ಸಿಂಹಾಸನ ಜೋಡಣೆ ನಂತರ ಅರಮನೆಯ ಕನ್ನಡಿ ತೊಟ್ಟಿಗೆ ಆಗಮಿಸುವ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗೆ ಪೂಜೆ ಸಲ್ಲಿಸಿದ ನಂತರ ಸಿಂಹಾಸನ ಜೋಡಿಸಿ ಪೂಜೆ ಸಲ್ಲಿಸಲಾಗುತ್ತದೆ ಮತ್ತು ಸಂಜೆ ಸಹ ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ರತ್ನ ಖಚಿತ ಸಿಂಹಾಸನ ಜೋಡಣೆ

ಜೊತೆಗೆ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸಿ ಅಕ್ಟೋಬರ್ 15 ರಂದು ಭಾನುವಾರ ಬೆಳಗ್ಗೆ 6 ಗಂಟೆಯಿಂದ 6.25 ರ ಶುಭ ಮುಹೂರ್ತದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಆಗುತ್ತದೆ. ಆನಂತರ ಅಂದು ಯಧುವೀರ್ ಹಾಗೂ ತ್ರಿಷಿಕಾ ಒಡೆಯರ್​ಗೆ ಕಂಕಣ ಧಾರಣೆ ನಡೆಯುತ್ತದೆ. ಬಳಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾಗಿ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸುತ್ತವೆ. ಅಕ್ಟೋಬರ್ 15 ರ 10:15ಕ್ಕೆ ಸಿಂಹಾಸನ ಪೂಜೆ ನೆರವೇರಿಸಿ ಬಳಿಕ ರಾಜ ವಂಶಸ್ಥರ ರಾಜ ಪರಂಪರೆಯಂತೆ ಅಂದು ಖಾಸಗಿ ದರ್ಬಾರ್ ನಡೆಯಲಿದೆ. ಕೊನೆಗೆ, ಅಕ್ಟೋಬರ್ 24ರ ವರೆಗೆ ಪ್ರತಿನಿತ್ಯ ಖಾಸಗಿ ದರ್ಬಾರ್ ನಡೆಸುವ ರಾಜ ವಂಶಸ್ಥರಾದ ಯಧುವೀರ್, ವಿಜಯದಶಮಿ ದಿನ ಸಂಜೆ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡಿ, ಶರನ್ನವರಾತ್ರಿಯ ಪೂಜೆಗಳನ್ನು ಕೊನೆಗೊಳಿಸುತ್ತಾರೆ.

ರತ್ನ ಖಚಿತ ಸಿಂಹಾಸನ ಜೋಡಣೆ

ಸಿಂಹಾಸನ ಜೋಡಣೆ ಹೇಗೆ ನಡೆಯುತ್ತದೆ :ರತ್ನ ಖಚಿತ ಸಿಂಹಾಸನವನ್ನು ಶರನ್ನವರಾತ್ರಿಯ ಪೂಜೆಯ ನಂತರ 13 ಭಾಗಗಳಾಗಿ ವಿಂಗಡಿಸಿ ಭದ್ರತಾ ಕೊಠಡಿಯಲ್ಲಿ ಇಟ್ಟಿರುತ್ತಾರೆ. ಸಿಂಹಾಸನದಲ್ಲಿ ಕುಳಿತು ಕೊಳ್ಳುವ ಭಾಗ, ಇನ್ನೊಂದು ಸಿಂಹಾಸನಕ್ಕೆ ಮೇಲೆ ಹತ್ತಲು ಮೆಟ್ಟಿಲುಗಳ ಭಾಗ, ಮತ್ತೆ ಸಿಂಹಾಸನದ ಮೇಲ್ಭಾಗಕ್ಕೆ ಸಿಂಗಾರಗೊಳಿಸುವ ಛತ್ರಿ ಹಾಗೂ ಛತ್ರಿಯ ಮೇಲೆ ನವಿಲಿನ ಆಕಾರದ ಭಾಗ ಇರುತ್ತವೆ. ಇವೆಲ್ಲವೂ 13 ಭಾಗಗಳಾಗಿ ಬೆರ್ಪಟ್ಟು ಇರುತ್ತದೆ. ಈ ಭಾಗಗಳನ್ನು ಅಂಬಾವಿಲಾಸ ದರ್ಬಾರ್ ಹಾಲ್​ಗೆ ತಂದು ಜೋಡಣೆ ಮಾಡುವುದನ್ನು ಸ್ವರ್ಣಾಸನ ಜೋಡಣಾ ಕಾರ್ಯ ಎಂದು ಕರೆಯುತ್ತಾರೆ. ಇದೇ ರತ್ನ ಖಚಿತ ಸಿಂಹಾಸನ ಜೋಡಣೆ ಆಗಿದ್ದು, ಇಂದು ಜೋಡಣೆಯಾದ ಸಿಂಹಾಸನಕ್ಕೆ ಅಕ್ಟೋಬರ್ 15 ರಂದು ಸಿಂಹ ಜೋಡಣೆ ಮಾಡಿ, ಪೂಜೆ ಸಲ್ಲಿಸುತ್ತಾರೆ. ಬಳಿಕ ಯದುವೀರ್ ಒಡೆಯರ್ 10 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಿ, ವಿಜಯ ದಶಮಿಯ ದಿನ ಸಿಂಹಾಸನದಲ್ಲಿನ ಸಿಂಹ ವಿಸರ್ಜನೆ ಮಾಡಿ, ಕೊನೆಗೆ ನವಂಬರ್ 8 ರಂದು ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನವನ್ನು ಬಿಡಿಭಾಗಗಳಾಗಿ ವಿಂಗಡಿಸಿ, ಅರಮನೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ಇಡುತ್ತಾರೆ.

ಹೀಗೆ ನವರಾತ್ರಿ ಸಂದರ್ಭದಲ್ಲಿ ಮಾತ್ರ ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್​ನಲ್ಲಿ ಜೋಡಣೆಯಾಗುವ ಸಿಂಹಾಸನವನ್ನು ನೋಡಲು ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ವಿಶೇಷವಾಗಿದೆ.

ಇದನ್ನೂ ಓದಿ :Mysuru Dasara: ಚಿಕ್ಕಂದಿನಿಂದ ಅರಮನೆಯ ಆಶ್ರಯದಲ್ಲಿ ಬೆಳೆದಿದ್ದ 'ರೋಹಿತ್​'.. ರಾಜವಂಶಸ್ಥರಿಗೆ ಈ ಆನೆ ಕಂಡ್ರೆ ಅಚ್ಚುಮೆಚ್ಚು

Last Updated : Oct 9, 2023, 7:05 PM IST

ABOUT THE AUTHOR

...view details