ಮೈಸೂರು: ನಾಳೆ ಕೃಷ್ಣ ಪಕ್ಷದ ಸಪ್ತಮಿ ರೇವತಿ ನಕ್ಷತ್ರದಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿಯ ವರ್ಧಂತಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ.
ಸಕಲ ಸಿದ್ಧತೆಯೊಂದಿಗೆ ಮೈಸೂರಿನ ಶ್ರೀಚಾಮುಂಡಿ ತಾಯಿಯ ವರ್ಧಂತಿ.. - undefined
ನಾಳೆ ಬೆಳಗ್ಗೆ ಶ್ರೀಚಾಮುಂಡಿ ತಾಯಿಯ ವರ್ಧಂತಿ ಉತ್ಸವ ಜರುಗಲಿದ್ದು, ಸಕಲ ಸಿದ್ದತೆಗಳೊಂದಿಗೆ ಚಾಮುಂಡಿ ಬೆಟ್ಟ ಸಜ್ಜಾಗಿದೆ. ಈ ಕಾರ್ಯಕ್ರಮಕ್ಕೆ ರಾಜ ವಂಶಸ್ಥರು ಚಾಲನೆ ನೀಡಲಿದ್ದು, ತಾಯಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು.

ಆಷಾಢ ಮಾಸದ 3ನೇ ಶುಕ್ರವಾರದ ನಂತರ ಬರುವ ಸಪ್ತಮಿ ರೇವತಿ ನಕ್ಷತ್ರ ಸಮಯ 10.30ಕ್ಕೆ ಅಂದರೆ ನಾಳೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ(ಹುಟ್ಟುಹಬ್ಬ) ನಡೆಯಲಿದೆ. ಈ ವರ್ಧಂತಿಗೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ದಂಪತಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ನಾಳೆ ಮುಂಜಾನೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಭಿಷೇಕ, ಸಹಸ್ರನಾಮಚರಣೆ ಮತ್ತು ಇತರ ಪೂಜಾ ಕೈಕರ್ಯಗಳು ನಡೆಯಲಿದೆ. ನಂತರ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್, ಮಂಗಳ ವಾದ್ಯಗಳು ಸೇರಿದಂತೆ ಹಲವಾರು ರೀತಿಯ ಜನಪದ ಕಲಾ ತಂಡಗಳು ಭಾಗವಹಿಸಲಿದ್ದು, ವರ್ಧಂತಿಯ ದಿನ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರಲಿದ್ದಾರೆ. ವಿಶೇಷವೆಂದರೆ ರಥೋತ್ಸವ ಸಾಗುವ ಮಾರ್ಗದಲ್ಲಿ 21 ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಚಾಮುಂಡೇಶ್ವರಿ ತಾಯಿಗೆ ರಾಜ ಪರಂಪರೆಯ ಗೌರವ ನೀಡಲಾಗುವುದು.