ಮೈಸೂರು: ಈ ಬಾರಿ ದಸರಾದಲ್ಲಿ ರಾಜ ವಂಶಸ್ಥರ ಶರನ್ನವರಾತ್ರಿ ಪೂಜಾ ಕೈಂಕರ್ಯಗಳ ವಿವರಗಳು ನಿಗದಿಯಾಗಿದೆ. ಅದರಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ, ಖಾಸಗಿ ದರ್ಬಾರ್, ಅರಮನೆಯಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನಡೆಸುವ ರಾಜ ಪರಂಪರೆಯ ಶರನ್ನವರಾತ್ರಿಯ ಪೂಜಾ ವಿವರಗಳು ಹೀಗಿವೆ.
ಅ. 9ರಂದು ರತ್ನ ಖಚಿತ ಸಿಂಹಾಸನ ಜೋಡಣೆ:ರಾಜ ಪರಂಪರೆಯ ಶರನ್ನವರಾತ್ರಿಯ ಪ್ರಮುಖ ಆಕರ್ಷಣೆಯಾದ ರತ್ನ ಖಚಿತ ಸಿಂಹಾಸನ ಜೋಡಣೆ ಅ. 9ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಗೆಜ್ಜಗಳ್ಳಿಯ ನುರಿತ ಕೆಲಸಗಾರರಿಂದ ಆಗಲಿದೆ. ಅದಕ್ಕೂ ಮುನ್ನ ಅರಮನೆಯಲ್ಲಿ ಬೆಳಗ್ಗೆಯಿಂದಲೇ ನವಗ್ರಹ ಪೂಜೆ, ಹೋಮಹವನಗಳು ನಡೆಯಲಿವೆ. ಆನಂತರ ಅರಮನೆಯ ನೆಲ ಮಾಳಿಗೆಯ ಸ್ಟ್ರಾಂಗ್ ರೂಂನಲ್ಲಿರುವ ಬಿಡಿ ಬಿಡಿ ಭಾಗದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತಂದು, 10.05ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯಲಿದೆ. ಆನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಗೆ ಆಗಮಿಸಲಿದ್ದು, ಅವುಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ಅ. 15ರಂದು ಖಾಸಗಿ ದರ್ಬಾರ್: ಅರಮನೆಯ ರಾಜಪರಂಪರೆಯಂತೆ ಶರನ್ನವರಾತ್ರಿಯ ಮೊದಲ ದಿನ ಅ. 15ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿರುವ ರತ್ನ ಖಚಿತ ಆಸನಕ್ಕೆ ಅಂದು ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಆಗ ಆಸನ ಸಿಂಹಾಸನವಾಗುತ್ತದೆ. ಆನಂತರ ಬೆಳಗ್ಗೆ ಅರಮನೆಯ ಒಳಗೆ ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಅನಂತರ ಬೆಳಗ್ಗೆ 7.05ರಿಂದ 7.45ರ ಶುಭ ಲಗ್ನದಲ್ಲಿ ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಕಂಕಣ ಧಾರಣೆ ಮಾಡಿಕೊಳ್ಳುತ್ತಾರೆ. ಆ ಬಳಿಕ ಅ. 15ರ ಭಾನುವಾರ ಬೆಳಗ್ಗೆ 9.45ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿಗೆ ಪೂಜೆ ಸಲ್ಲಿಸಿದ ಬಳಿಕ, 11.30ರಿಂದ 11.50ಕ್ಕೆ ದರ್ಬಾರ್ ಹಾಲ್ನಲ್ಲಿ ಸಿಂಹಾಸನಕ್ಕೆ ರಾಜ ಪರಂಪರೆಯಂತೆ ಪೂಜೆ ಸಲ್ಲಿಸಿ, ರಾಜ ವಂಶಸ್ಥರು ರತ್ನ ಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ನಿತ್ಯ ಸಂಜೆ ಶರನ್ನವರಾತ್ರಿ ದಿನಗಳಲ್ಲಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಅ. 20ಕ್ಕೆ ಸರಸ್ವತಿ ಪೂಜೆ: ರಾಜ ವಂಶಸ್ಥರು ಬಳಸುತ್ತಿದ್ದ ವೀಣೆ, ಧರ್ಮ ಗ್ರಂಥಗಳನ್ನು ಶಾರದಾ ದೇವಿಯ ಫೋಟೋದ ಮುಂದೆ ಇಟ್ಟು ವಿದ್ಯಾ ದೇವತೆಯಾದ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಅ. 21ರಂದು ಕಾಳರಾತ್ರಿ ಪೂಜೆ ಹಾಗೂ 22ರಂದು ದುರ್ಗಾಷ್ಠಮಿ ಪೂಜೆ ನೆರವೇರಲಿವೆ. ರಾಜ ವಂಶಸ್ಥರು ಈ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಿದ್ದಾರೆ.