ಮೈಸೂರು :11 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಅರ್ಧ ಕೆಜಿಯಷ್ಟಿದ್ದ ತಲೆಕೂದಲಿನ ಗೆಡ್ಡೆ ಪತ್ತೆಯಾಗಿದ್ದು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದಿದ್ದಾರೆ. 8 ತಿಂಗಳಿನಿಂದ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಹಲವು ಬಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೂ ವೈದ್ಯರಿಗೆ ಹೊಟ್ಟೆನೋವು ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ನೋವು ತಾಳಲಾರದೇ ಬಾಲಕಿ ಶಾಲೆಯಿಂದಲೂ ಹೊರಗುಳಿಯಬೇಕಾಗಿತ್ತು. ನಂತರ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ನಡೆಸಿದ್ದು ಹೊಟ್ಟೆಯಲ್ಲಿ ಕೂದಲಿನ ಗೆಡ್ಡೆ ಇರುವುದು ಗೊತ್ತಾಗಿದೆ. ಆಹಾರ ಪದಾರ್ಥಗಳೊಂದಿಗೆ ಸೇರಿದ 15×20×5 ಸೆಂಟಿಮೀಟರ್ ಗಾತ್ರದ ಅರ್ಧ ಕೆಜಿ ಕೂದಲಿನ ಗೆಡ್ಡೆಯನ್ನು ಮುಖ್ಯ ಸರ್ಜಿಕಲ್ ಗ್ಯಾಸ್ಟ್ರೋಡಂಟರಾಲಜಿಸ್ಟ್ ಡಾ.ನೈರುತ್ಯ ಶಿವತೀರ್ಥನ್ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಈಗ ಬಾಲಕಿ ಹೊಟ್ಟೆ ನೋವಿನಿಂದ ಮುಕ್ತಳಾಗಿದ್ದಾಳೆ.