ಮೈಸೂರು:ಶುಭ ಶುಕ್ರವಾರದ ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಆ ಮೂಲಕ 2023 ರ ನಾಡಹಬ್ಬ ದಸರಾಗೆ ಮುನ್ನುಡಿ ಬರೆಯಲಾಯಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ 9 ಗಜಪಡೆಗಳಾದ ಮಹೇಂದ್ರ, ಅರ್ಜುನ, ವರಲಕ್ಷ್ಮಿ, ಧನಂಜಯ, ಗೋಪಿ, ವಿಜಯ, ಪಾರ್ಥಸಾರಥಿ, ರೋಹಿತ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಉಸ್ತುವಾರಿ ಸಚಿವ ಮಹಾದೇವಪ್ಪ ಜೊತೆಗೂಡಿದ ಗಣ್ಯರಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು.
ಕಲಾತಂಡಗಳ ಆಕರ್ಷಣೆ:ಗಜಪಡೆಯ ಮುಂದೆ ಸಾಂಪ್ರದಾಯಿಕ ಕಂಸಾಳೆ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಗೊರವರ ಕುಣಿತ, ಗುರುಪುರದ ಟಿಬೇಟಿಯನ್ ಶಾಲಾ ಮಕ್ಕಳು ಹಾಗೂ ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಕಲಾತಂಡಗಳ ವೈಭವದ ಪ್ರದರ್ಶನ ಸಹ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಹುಣಸೂರಿನ ಶಾಸಕ ಜಿ ಡಿ.ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಸೇರಿದಂತೆ, ಅರಣ್ಯ ಸಚಿವ ಈಶ್ವರ ಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಪುಸ್ತಕ ಬಿಡುಗಡೆ ಮಾಡಿದರು. ಇವರ ಜೊತೆಗೆ ಹಲವು ಸಚಿವರು, ಶಾಸಕರು, ಹಿರಿಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಪುಷ್ಪಾರ್ಚನೆ:ದಸರಾ ಗಜ ಪಯಣಕ್ಕೆ ವೀರನ ಹೊಸಹಳ್ಳಿ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಅವರು ಚಾಲನೆ ನೀಡಿದರು. ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲು ಸಜ್ಜಾಗಿವೆ. ಗಜ ಪಯಣ ದಲ್ಲಿ ಅಭಿಮನ್ಯು ಸೇರಿದಂತೆ ಅರ್ಜುನ, ಬೀಮ, ಗೋಪಿ, ಧನಂಜಯ, ವರಲಕ್ಷ್ಮಿ, ವಿಜಯ, ಮಹೇಂದ್ರ ಹಾಗೂ ಕಂಜನ್ ಆನೆಗಳು ಮೈಸೂರಿಗೆ ಆಗಮಿಸಲಿವೆ.
ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ವಿಶ್ವ ವಿಖ್ಯಾತ ದಸರಾ ಆಚರಣೆಯ ಹಿನ್ನೆಲೆ ಯಲ್ಲಿ ದಸರಾ ಗಜ ಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮಾಡಲಾಗಿದೆ. ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ ಆದ್ದರಿಂದ ಇದು ವಿಶ್ವ ವಿಖ್ಯಾತಿ ಯನ್ನು ಪಡೆದಿದೆ. ಸ್ವಾತಂತ್ಯ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಅನೆ ಮೇಲೆ 800 ಕೆಜಿ ತೂಕದ ಅಂಭಾರಿಯನ್ನು ಮೆರವಣಿಗೆ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಇಡೀ ದೇಶದ 140 ಕೋಟಿ ಜನರು ಎಲ್ಲರೂ ಒಂದೇ ಎಂಬ ಸಂದೇಶವನ್ನು ಬಿಂಬಿಸಲಾಗುತ್ತದೆ ಎಂದರು.
ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿ ಗಜ ಪಯಣ ದಸರಾ ಮಹೋತ್ಸವದ ಆರಂಭ. ನಾವು ಯಾವುದೇ ಶುಭ ಕಾರ್ಯ ಮಾಡಲು ಗಣಪತಿ ಯನ್ನು ಪೂಜಿಸುತ್ತೇವೆ. ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆಪ್ಟಂಬರ್ 05 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದರು.