ಮೈಸೂರು:ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ಸಂಸ್ಥೆಯಿಂದ ಪ್ರಸ್ತುತ ಘಟನೆಗಳ ಕುರಿತಾದ ನಿರ್ಮಾಣವಾಗಿರುವ 'ಗಾಯಗಳು' ಎಂಬ ನಾಟಕ ಜುಲೈ 29 ರಂದು ಮೈಸೂರಿನ ನಟ ಮಂಡ್ಯ ರಮೇಶ್ ಅವರ ನಟನಾ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಶ್ರೀರಂಗಪಟ್ಟಣದ ಹತ್ತಿರವಿರುವ ತಮ್ಮ ಫಾರಂ ಹೌಸ್ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ತಾವು ನಿರ್ಮಾಣ ಮಾಡಿರುವ ನಿರ್ದಿಗಂತ ಎಂಬ ನಟನಾ ಪ್ರಯೋಗ ಶಾಲೆಯಲ್ಲಿ ಬೇರೆ ಬೇರೆ ನಟನಾ ಶಾಲೆಗಳಿಂದ ಕಲಿತು ಬಂದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಶ್ರೀಪಾದ ಭಟ್ ಅವರ ನಿರ್ದೇಶನದ, 14ಕ್ಕೂ ಹೆಚ್ಚು ಪಾತ್ರಧಾರಿಗಳನ್ನು ಒಳಗೊಂಡ 'ಗಾಯಗಳು' ಎಂಬ ನಾಟಕವನ್ನು ಆಗಸ್ಟ್ 1 ರಂದು ಮೈಸೂರಿನ ಕಲಾ ಮಂದಿರದ ಕಿರು ರಂಗ ಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ'' ಎಂದರು.
ದೇಶದಲ್ಲಿ ಉಂಟಾಗಿರುವ ಕೋಮು ಗಲಭೆ ಕುರಿತ ಕಥಾ ಹಂದರ ಹೊಂದಿರುವ ನಾಟಕ:ಪ್ರಕಾಶ್ ರಾಜ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿರುವ 'ಗಾಯಗಳು' ನಾಟಕವು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾಗತಿಕ ಯುದ್ಧ, ಕೋಮು ಗಲಭೆ, ಮಹಿಳೆಯರು ಮೇಲಿನ ದೌರ್ಜನ್ಯ ಸೇರಿದಂತೆ ಪ್ರಮುಖವಾಗಿ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಕಲಹಗಳ ಬಗ್ಗೆ ಜನರು ಅರಿತಿದ್ದಾರೆ. ಕಲೆ ಒಂದು ಭಾಷೆ, ಈ ಭಾಷೆಯ ಮೂಲಕ ಅವುಗಳನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು.