ಕರ್ನಾಟಕ

karnataka

ETV Bharat / state

ಮೈಸೂರು: ಡಿ.22 ರಿಂದ 31ರವರೆಗೆ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶ‌ನ: ಕಣ್ಮನ ಸೆಳೆಯಲಿದೆ 4 ಲಕ್ಷ ಹೂಗಳು - ಮೈಸೂರು

ಮೈಸೂರಿನಲ್ಲಿ ಮಾಗಿ ಉತ್ಸವ ನಡೆಯಲಿದ್ದು, ಡಿಸೆಂಬರ್​ 22 ರಿಂದ 31ರವರೆಗೆ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶ‌ನ ನಡೆಯಲಿದೆ.

Preparing for the fruit show
ಫಲಪುಷ್ಪ ಪ್ರದರ್ಶ‌ನ

By ETV Bharat Karnataka Team

Published : Dec 20, 2023, 12:27 PM IST

ಮೈಸೂರು:‌ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಗಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ. ಅರಮನೆಯ ಆವರಣದಲ್ಲಿ ಹತ್ತು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, 4 ಲಕ್ಷ ಹೂಗಳು ಪ್ರವಾಸಿಗರನ್ನು ಹೂಗಳ ಲೋಕಕ್ಕೆ ತೇಲಿಸಲಿದೆ.

ಡಿ.22ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡುವರು. ಅಂದು 500 ಮಂದಿಗೆ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರ ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೀಡಲಾಗುವುದು.

ಫಲಪುಷ್ಪ ಪ್ರದರ್ಶ‌ನಕ್ಕೆ ಸಿದ್ಧತೆ

ಮೈಸೂರಿನ ಅರಮನೆ ಆವರಣದಲ್ಲಿ ಡಿ.22 ರಿಂದ 31ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸೋಮನಾಥಪುರ ಚೆನ್ನಕೇಶವ ದೇವಾಲಯ, ಹಂಪಿಯ ಕಲ್ಲಿನ ರಥ, ಸಂವಿಧಾನ ಪೀಠಿಕೆ, ಸಿರಿಧಾನ್ಯ ವರ್ಷವಾದ್ದರಿಂದ ಮಲೆ ಮಹದೇಶ್ವರ ಸ್ವಾಮಿಯು ಹುಲಿಯನ್ನೇರಿ ಬರುವ ಮಾದರಿಯನ್ನು ಸಿರಿಧಾನ್ಯ ಹಾಗೂ ಹೂ ಬಳಸಿ ನಿರ್ಮಿಸಲಾಗಿದೆ.

ಕಾಡಂಚಿನ ಪ್ರದೇಶದಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ನೆನಪಿಸುವ ಕಬ್ಬು-ಬಾಳೆ ತೋಟದ ಮಧ್ಯ ಇರುವ ತಾಯಿ-ಮರಿಯಾನೆಗಳ ಮಾದರಿ ಕಣ್ಮನ ಸೆಳೆಯಲಿದೆ. ಹಂಪಿ ಕಲ್ಲಿನ ರಥ, ವಿರೂಪಾಕ್ಷ, ಶಿವಲಿಂಗ, ಓರೆಯಾದ ಹೂಕುಂಡ, ರಾಜ್ಯದ ನಕ್ಷೆಗೆ ದೀಪಾಲಂಕಾರ ಮಾದರಿ, ವಾಣಿವಿಲಾಸ ಸನ್ನಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ರಾಜ್​ಕುಮಾರ್​ ನೇಗಿಲು ಉಳುಮೆ ಮಾಡುವ ದೃಶ್ಯದ ಮಾದರಿಗಳು ಫಲಪುಷ್ಪ ಪ್ರದರ್ಶನದಲ್ಲಿ ಇರಲಿದೆ. ಫಲಪುಷ್ಪ ಪ್ರದರ್ಶನ ನೋಡಲು ಬರುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಜಯಚಾಮರಾಜ ಒಡೆಯರ್​ ಅವರ ಕರ್ನಾಟಕ ಸಂಗೀತ ಕೃತಿಗಳನ್ನು ಆಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಡಿ.22 ರಿಂದ 25ರವರೆಗೆ ಪ್ರತಿದಿನ ಸಂಜೆ 5.45 ರಿಂದ ರಾತ್ರಿ 9.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮೊದಲ ದಿನ ಸಂಜೆ 5.15ಕ್ಕೆ ರಾಜ ಲಾಂಛನ, ಬಿರುದುಗಳೊಂದಿಗೆ ಅರಮನೆ ಆವರಣದಲ್ಲಿ ನಾಡದೇವಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆ ನಡೆಯಲಿದೆ. 6 ರಿಂದ 6.45 ರವರೆಗೆ ಎ.ಎಂ.ಗುರುರಾಜ್ ತಂಡದಿಂದ ವಾದ್ಯಸಂಗೀತ, 6.45ರಿಂದ 7 ರವರೆಗೆ ಎ.ಆರ್. ಕಲಾತಂಡದಿಂದ ನಾಡಗೀತೆ, ಮೈಸೂರು ಸಂಸ್ಥಾನದ ನಾಡಗೀತೆ ಕಾಯೋಶ್ರೀ ಗೌರಿ ಕರುಣಾಲಹರಿ ಗೀತೆ ಗಾಯನ, 7.20 ರಿಂದ 9.30 ರವರೆಗೆ ಹಿನ್ನೆಲೆ ಗಾಯಕ ಮನೋ ಅವರಿಂದ ಸಂಗೀತ ಸಂಜೆ ನಡೆಯಲಿದೆ.

ಡಿ.23 ರಂದು ಸಂಜೆ 5.45 ರಿಂದ 6.30 ರವರೆಗೆ ಹನುಮಂತರಾಜು ಅವರಿಂದ ಲಯ - ನಾದ ತರಂಗ ಸಂಗೀತ ಮಿಲನ, 6.30 ರಿಂದ 7.30 ರವರೆಗೆ ಕಿಶನ್​ ಬಿಳಿಗಲಿದ ಅಕಾಡೆಮಿ ಡ್ಯಾನ್ಸ್ ತಂಡದಿಂದ ನೃತ್ಯ, 7.45ರಿಂದ 9.45 ರವರೆಗೆ ಹಿನ್ನೆಲೆ ಗಾಯಕ ಏಕಂಬರಂ ಲಕ್ಷ್ಮಿ ನಾರಾಯಣ್ ಅವರಿಂದ ಸಂಗೀತ ರಸಸಂಜೆ. ಹಾಗೇ ಡಿ.24 ರಂದು 5.45 ರಿಂದ 6.30 ರವರೆಗೆ ರೆನ್ಸಿ ಎನ್.ಯೋಗೇಶ್​ ತಂಡದಿಂದ ಕರಾಟೆ ಇಂಡಿಯಾ ಸಮರ ಕಲೆ ಪ್ರದರ್ಶನ, 6.30 ರಿಂದ 7.15 ರವರೆಗೆ ಹೇಮಲತಾ ಕುಮಾರಸ್ವಾಮಿ ತಂಡದಿಂದ ಸುಗಮ ಸಂಗೀತ, 7 ರಿಂದ 9.30 ರವರೆಗೆ ಗಾಯಕರಾದ ಹೇಮಂತ್, ಶಮಿತ ಮಲ್ನಾಡ್, ಪೃಥ್ವಿ ಭಟ್, ಅಶ್ವಿನ್ ಶರ್ಮ, ಅಂಕಿತ ಕುಂಡು ತಂಡದಿಂದ ಸಂಗೀತಯಾನ ಕಾರ್ಯಕ್ರಮ ಜರುಗಲಿದೆ.

ಡಿ.25 ರಂದು ಸಂಜೆ 6ರಿಂದ 7ರವರೆಗೆ ನಾಗಲಕ್ಷ್ಮಿ ತಂಡದಿಂದ ನೃತ್ಯ, 7ರಿಂದ 8ರವರೆಗೆ ವಿದ್ಯಾಭೂಷಣ್ ಮತ್ತು ರಘುಪತಿ ಭಟ್ ಅವರಿಂದ ಕುಂಚಗಾಯನ, 8ರಿಂದ 10 ಗಂಟೆವರೆಗೆ ಗಾಯಕಿ ಎಂ.ಡಿ.ಪಲ್ಲವಿ ತಂಡದಿಂದ ಸುಗಮ ಸಂಗೀತ ಗಾಯನ ಇರಲಿದೆ. ಡಿ.31 ರಂದು ರಾತ್ರಿ 11ರಿಂದ 12 ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಇರಲಿದೆ. ನಂತರ ರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ ಬಿರುಸುಗಳಿಂದ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.

ಇದನ್ನೂ ಓದಿ:ಬೆಂಗಳೂರು: ಅದ್ಧೂರಿಯಾಗಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಕೇಕ್​ ಶೋನ ಝಲಕ್​ ನೋಡಿ..

ABOUT THE AUTHOR

...view details