ಮೈಸೂರು:ಶ್ರೀ ಸುತ್ತೂರು ಕ್ಷೇತ್ರದಲ್ಲಿ ಫೆಬ್ರವರಿ 6ರಿಂದ 11ರವರೆಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ.7ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಸಮಾಜದ ಎಲ್ಲ ವರ್ಗದವರಿಗೂ ಮುಕ್ತ ಅವಕಾಶವಿರುತ್ತದೆ ಎಂದು ಜಾತ್ರಾ ಮಹೋತ್ಸವ ಕಾರ್ಯಾಲಯ ಮಾಹಿತಿ ನೀಡಿದೆ.
ವಧುವಿಗೆ ಮಾಂಗಲ್ಯ, ಸೀರೆ, ಕುಪ್ಪಸ ಕಾಲುಂಗುರ ಹಾಗೂ ವರನಿಗೆ ಪಂಚೆ, ವಲ್ಲಿ, ಶರ್ಟ್‌ಗಳನ್ನು ನೀಡಲಾಗುತ್ತದೆ. ವಧು-ವರರು ಹಾಗೂ ಜೊತೆಯಲ್ಲಿ ಬರುವ ಬಂಧು ವರ್ಗದವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ನಿಯಮಿತ ಸಂಖ್ಯೆಯ ಸಂಬಂಧಿಕರಿಗೆ ಹಿಂದಿನ ದಿನ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.
ವಿವಾಹವಾಗಲು ಬಯಸುವವರು ನಿಗದಿತ ಅರ್ಜಿಯನ್ನು ಪಡೆದು ಪೂರ್ಣ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ನೀಡಿ ಜ.25ರೊಳಗಾಗಿ ಜಾತ್ರಾ ಮಹೋತ್ಸವ ಕಾರ್ಯಾಲಯ ಮೈಸೂರು ಹಾಗೂ ಸುತ್ತೂರು ಕ್ಷೇತ್ರದ ಜೆಎಸ್ಎಸ್ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ಮಹಾವಿದ್ಯಾಪೀಠದ ಜಾತ್ರಾ ಮಹೋತ್ಸವ ಕಾರ್ಯಾಲಯ ಅಥವಾ ಸಂಚಾಲಕರನ್ನು 0821-2548212-122, 9448674702 ಫೋನ್ ಮಾಡಿ ಸಂಪರ್ಕಿಸಬಹುದು.
ದನಗಳ ಜಾತ್ರೆ:ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ 53ನೇ ದನಗಳ ಜಾತ್ರೆಗೆ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳನ್ನು ಕಟ್ಟುವುದಕ್ಕೆ ವ್ಯವಸ್ಥೆ ನಡೆದಿದೆ. ಜಾನುವಾರಗಳನ್ನು ಕೊಳ್ಳಲು ಮತ್ತು ಮಾರಲು ಜಾತ್ರೆಯಲ್ಲಿ ಅವಕಾಶವಿದೆ. ಉತ್ತಮ ರಾಸುಗಳಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ. ಪಶುಪಾಲನಾ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆಗಳಿಂದ ದನಗಳಿಗೆ ಉಚಿತ ಆರೋಗ್ಯ ತಪಾಸಣೆ, ಚುಚ್ಚುಮದ್ದು ಮತ್ತು ಜಂತುಹುಳು ನಿವಾರಕ ಔಷಧಿ ನೀಡಲಾಗುತ್ತದೆ. ರಾಸುಗಳನ್ನು ಕಟ್ಟಲು ಮುಂಚಿತವಾಗಿ ಜಾಗವನ್ನು ಕಾಯ್ದಿರಿಸಬಹುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳೊಡನೆ ಆಗಮಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಜಾತ್ರಾ ಮಹೋತ್ಸವ ಕಾರ್ಯಾಲಯದಲ್ಲಿ ನೇರವಾಗಿ ಅಥವಾ ದೂರವಾಣಿ ಸಂಖ್ಯೆ 0821-2548212-122 9845246023 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿಂದು 'ಯುವನಿಧಿ' ಗ್ಯಾರಂಟಿಗೆ ಸಿಎಂ ಚಾಲನೆ; ಬೃಹತ್ ವೇದಿಕೆ ಸಿದ್ಧ