ಮೈಸೂರು: ಈ ಬಾರಿ ಅತೃಪ್ತರ ಮನವೊಲಿಸಿದರೆ ಇನ್ನು ನಾಲ್ಕು ವರ್ಷ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಗಂಡಾಂತರ ಎದುರಾಗುವುದಿಲ್ಲವೆಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅತೃಪ್ತರ ಮನವೊಲಿಸಿದರೆ ನಾಲ್ಕು ವರ್ಷ ಸರ್ಕಾರ ಸೇಫ್: ಶಾಸಕ ಯತೀಂದ್ರ ಸಿದ್ದರಾಮಯ್ಯ - kannadanews
ಈ ಬಾರಿ ಅತೃಪ್ತರ ಮನವೊಲಿಸಿದರೆ ನಾಲ್ಕು ವರ್ಷ ಮೈತ್ರಿ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಯತೀಂದ್ರ ಹೇಳಿದ್ದಾರೆ.
ಮೈಸೂರಿನ ಟಿ.ನರಸೀಪುರ ತಾಲೂಕಿನ ಹಿಟ್ಟುವಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನು ನಮ್ಮ ನಾಯಕರು ಮನವೊಲಿಸುತ್ತಿದ್ದಾರೆ. ಅಲ್ಲದೇ ಖುದ್ದು ಮುಖ್ಯಮಂತ್ರಿಗಳೇ ಅತೃಪ್ತರ ಮನವೊಲಿಸಲು ಮುಂದಾಗಿದ್ದಾರೆ. ಸದ್ಯ ಇದೊಂದು ಪರಿಸ್ಥಿತಿಯನ್ನ ಮೈತ್ರಿ ಪಕ್ಷ ಎದುರಿಸಿದರೆ ಇನ್ನುಳಿದ ನಾಲ್ಕು ವರ್ಷ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ನಾವು ನಮ್ಮ ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಡಾ. ಯತೀಂದ್ರ ತಿಳಿಸಿದ್ರು.
ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದಿದ್ದು, ಮುಖ್ಯಮಂತ್ರಿಗಳಿಗೆ ಸರ್ಕಾರದ ಮೇಲೆ ತುಂಬಾ ವಿಶ್ವಾಸವಿದೆ. ಕೆಲ ಅತೃಪ್ತ ಶಾಸಕರನ್ನು ಸೆಳೆದರೆ ಉಳಿದ ಅತೃಪ್ತ ಶಾಸಕರು ಬರುವ ವಿಶ್ವಾಸವಿದೆ ಎಂದರು. ಇದೇ ವೇಳೆ 5 ವರ್ಷ ಪೂರೈಸುವುದರ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಸಚಿವ ಜಿಟಿಡಿ ಹೇಳಿಕೆಗೆ ತಿರುಗೇಟು ನೀಡಿದ ಯತೀಂದ್ರ, ಯಾಕೆ ಈ ರೀತಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಬಿಜೆಪಿಯವರು ಪದೇ ಪದೇ ಆಪರೇಷನ್ ಕಮಲ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದನ್ನು ನೋಡಿ ಮುಂದೆ ಕೂಡ ಸಮಸ್ಯೆ ಉಂಟಾಗುತ್ತದೆ ಎಂಬ ಭಾವನೆಯಿಂದ ಹೇಳಿದ್ದಾರೆ ಎಂದ್ರು.