ಮೈಸೂರು: ನಗರದ ಚಾಮುಂಡಿ ಪುರಂನ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ನೋಟ್ ಆಧಾರದ ಮೇಲೆ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಭಾನುವಾರ ಚಾಮುಂಡಿ ಪುರಂನ ಮೊದಲನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹದೇವ ಸ್ವಾಮಿ, ಅವರ ಪತ್ನಿ ಅನಿತಾ ಮತ್ತು ಇಬ್ಬರು ಪುತ್ರಿಯರಾದ ಧನಲಕ್ಷ್ಮಿ ಹಾಗೂ ಚಂದ್ರಕಲಾ ಶವವಾಗಿ ಪತ್ತೆಯಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿತ್ತು. ಕೆ.ಆರ್.ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆತ್ಮಹತ್ಯೆಗೆ ಕಾರಣ ತಿಳಿಸಿದ ಡೆತ್ ನೋಟ್:ಆತ್ಮಹತ್ಯೆ ಮಾಡಿಕೊಂಡ ಮಹದೇವ ಸ್ವಾಮಿ ಎಪಿಎಂಸಿಯಲ್ಲಿ ತರಕಾರಿ ಮಾರಾಟದ ದಲ್ಲಾಳಿ ಕೆಲಸ ಮಾಡಿಕೊಂಡಿದ್ದರು. ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಂತ ಚಿಕ್ಕ ಮಳಿಗೆ ಹೊಂದಿದ್ದರು. ಇತ್ತೀಚೆಗೆ ಇದನ್ನು ಮಾರಾಟ ಮಾಡಲು ನಿರ್ಧರಿಸಿ ಮಾರುಕಟ್ಟೆಯಲ್ಲಿಯೇ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿಗಳಿಗೆ ಮಾರಾಟದ ಒಪ್ಪಂದ ಪತ್ರವನ್ನು ಮಾಡಿ, ಮಹದೇವ ಸ್ವಾಮಿ ಸ್ವಲ್ಪ ಹಣ ಮುಂಗಡವಾಗಿ ಪಡೆದುಕೊಂಡಿದ್ದರು. ಕೊನೆಗೆ ಒಪ್ಪಂದ ಪತ್ರವನ್ನು ರದ್ದುಗೊಳಿಸಲು ಕೇಳಿಕೊಂಡಿದ್ದರು. ಆದರೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮುಂಗಡ ಹಣ ಪಡೆದಿದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದರು. ಇದರಿಂದ ಮುಂಗಡ ಹಣ ಕೊಡುವಂತೆ ಒಪ್ಪಂದ ಮಾಡಿಕೊಂಡವರು ಕೇಳುತ್ತಿದ್ದರು ಎನ್ನಲಾಗಿದೆ. ಇದರಿಂದ ಹೆದರಿದ ಮಹದೇವ ಸ್ವಾಮಿ ತನಗೆ ಬೆದರಿಕೆ ಹಾಕಿದ ಆರು ಜನರ ಹೆಸರನ್ನು ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಕುಟುಂಬಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.