ಮೈಸೂರು: ಶ್ರೀಗಂಧದ ಮರ ಕದಿಯಲು ಮೈಸೂರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಭೂಪತಿ(24), ಫ್ರಾನ್ಸಿಸ್(26), ಸೆಂದಿಲ್ ಕುಮಾರ್(38) ಹಾಗೂ ಪ್ರವೀಣ್ ಕುಮಾರ್(20) ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ರೋಹಿಲ್ ಪರಾರಿಯಾಗಿದ್ದಾನೆ.
ಡಿಸಿಪಿ ಗೀತಾ ಪ್ರಸನ್ನ ಸುದ್ದಿಗೋಷ್ಠಿ ಮೈಸೂರು ಇವರ ಟಾರ್ಗೆಟ್:ಪ್ರಕರಣದ ಪ್ರಮುಖ ಆರೋಪಿ ರೋಹಿಲ್ ಪತ್ನಿ ಮೈಸೂರು ಮೂಲದವಳಾಗಿದ್ದು, ರೋಹಿಲ್ ಸೇರಿದಂತೆ ಈ ನಾಲ್ವರು ಬೆಳಗಿನ ಹೊತ್ತು ನಗರ ಸುತ್ತಾಡಿ ನಂತರ ರಾತ್ರಿ ವೇಳೆಯಲ್ಲಿ ಗಂಧದ ಮರಗಳನ್ನು ಕದಿಯುತ್ತಿದ್ದರು. ಕದ್ದ ಮರದ ತುಂಡಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ನಜರ್ಬಾದ್ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಕೆ.ಸಿ. ಬಡಾವಣೆಯ ಮುಖ್ಯ ರಸ್ತೆಯಲ್ಲಿ ಅನುಮಾನಾಸ್ಪಾದವಾಗಿ ನಿಂತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ.
ಬಂಧಿತರಿಂದ ಲ್ಯಾನ್ಸರ್ ಕಂಪನಿಯ ಒಂದು ಕಾರು, 5.50 ಲಕ್ಷ ರೂ. ಮೌಲ್ಯದ 46 ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ನಜರ್ಬಾದ್ ಠಾಣೆ, ಅಶೋಕಪುರಂ ಠಾಣೆಯಲ್ಲಿ ಎರಡೆರಡು ಪ್ರಕರಣ, ಕೆ.ಆರ್. ಠಾಣೆಯಲ್ಲಿ ಮೂರು ಪ್ರಕರಣ, ಜಯಲಕ್ಷ್ಮಿಪುರಂ, ಲಕ್ಷ್ಮಿಪುರಂ, ಎನ್.ಆರ್.ಠಾಣೆಯಲ್ಲಿ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ಗೀತಾ ಪ್ರಸನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.