ಮೈಸೂರು: ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರ ಸಂಸದರಾಗಿ ಒಂದೂವರೆ ವರ್ಷ ಕಳೆಯಿತು. ಆ ಕ್ಷೇತ್ರಕ್ಕೆ ಅವರ ಸಾಧನೆ ಏನು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಪ್ರಶ್ನಿಸಿದರು.
ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೇ ಸಾಧನೆ ಎಂದು ಕೆಲವರು ಅಂದುಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರು ಬಾದಾಮಿಯಲ್ಲೂ ಸೋತಿದ್ದರೆ ಗೊಂಡಾರಣ್ಯದಲ್ಲಿ ಅವಿತುಕೊಳ್ಳಬೇಕಿತ್ತು ಎಂದು ಕುಟುಕಿದರು. ನಮ್ಮದು ಅವಿತುಕೊಳ್ಳುವ ಜಾಯಮಾನವಲ್ಲ, ನಾನು ಚುನಾವಣೆಯಲ್ಲಿ ಸೋತ ದಿನ, ಅಂದು ಸಂಜೆಯೇ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಆದರೆ, ನನ್ನನ್ನು ಸೋಲಿಸಿದವರು ಕಳೆದ ಒಂದೂವರೆ ವರ್ಷದಿಂದ ನೀಡಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ಶಿರಾ ಹಾಗೂ ಆರ್ಆರ್ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕೇವಲ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಉಪ ಚುನಾವಣೆ ಸೋಲಿಗೆ ಸಾಮೂಹಿಕ ಹೊಣೆ ಹೊರಬೇಕಿದೆ. ಮುನಿರತ್ನ ಈ ಮೊದಲು ನಮ್ಮ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದವರು. ಆದರೆ, ಪಕ್ಷ ತೊರೆದಾಗ ಪಾಲಿಕೆ ಸದಸ್ಯರಿಂದ ಹಿಡಿದು, ಬ್ಲಾಕ್ ಮಟ್ಟದವರೆಗಿನ ಮುಖಂಡರನ್ನು ಅವರ ಜೊತೆ ಕರೆದೊಯ್ದರು, ಹಾಗಾಗಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು.