ಮೈಸೂರು: ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದ ಜನತೆಗೆ ಹಾಗೂ ರೈತರಿಗೆ ಸರ್ಕಾರ ತಪ್ಪುಮಾಹಿತಿ ನೀಡುತ್ತಿದ್ದೆ. ರಾಜ್ಯದ ಹಣಕಾಸಿನ ಬಗ್ಗೆ ಸಿಎಂ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜ ಸಂಸದ ಧ್ರುವನಾರಾಯಣ್ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಪ್ರವಾಹ ಹಾನಿಗೆ ಸೂಕ್ತ ಪರಿಹಾರ ನೀಡುತ್ತೇವೆಂದು ಸಿಎಂ ಹೇಳಿದ್ದಾರೆ. ಆದರೆ ಸರ್ಕಾರದ ಖಜಾನೆ ಖಾಲಿಯಾಗಿದೆ, 2019ರಲ್ಲಿ ಪ್ರವಾಹದಿಂದ 35,160 ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಕೇವಲ 3,891 ಕೋಟಿ ಪರಿಹಾರ ಬಂದಿದೆ ಎಂದರು.
2020-21ರಲ್ಲಿ ಉಂಟಾದ ಪ್ರವಾಹದಿಂದ 9,440 ಕೋಟಿ ನಷ್ಟವಾಗಿದೆ. ಆಗಲೂ ಕೇಂದ್ರ ಸರ್ಕಾರ ಕೇವಲ 755 ಕೋಟಿ ಪರಿಹಾರ ನೀಡಿ ಕೈತೊಳೆದು ಕೊಂಡಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಹೊರೆಯಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿ ಹಸಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಸಿಎಂ ಹಣಕಾಸಿನ ಕೊರತೆ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಎಂಬ ಸಿ.ಟಿ ರವಿ ಹೇಳಿಕೆಗೆ ಉತ್ತರಿಸಿದ ಅವರು, ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ. ಈ ಮಾತು ಹೇಳುವುದಕ್ಕೆ ಸಿ.ಟಿ.ರವಿಯವರಿಗೆ ನೈತಿಕತೆ ಇಲ್ಲ. ಸಿಎಂ ಯಡಿಯೂರಪ್ಪರ ಇಬ್ಬರೂ ಮಕ್ಕಳು ರಾಜಕಾರಣದಲ್ಲಿದ್ದಾರೆ. ಒಬ್ಬ ಮಗ ಸಂಸದನಾಗಿದ್ರೆ, ಇನ್ನೊಬ್ಬ ಮಗ ತಂದೆಯ ಹೆಸರಲ್ಲಿ ಅಧಿಕಾರ ನಡೆಸ್ತಿದ್ದಾರೆ. ಇಷ್ಟೇ ಸಾಕಲ್ಲವೇ ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ ಅನ್ನೊದಕ್ಕೆ ಎಂದು ತಿರುಗೇಟು ನೀಡಿದರು.
ಉಪಚುನಾವಣೆ ಫಲಿತಾಂಶ ಕುರಿತ ನಿನ್ನೆ ಮೈಸೂರಿನಲ್ಲಿ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ಹೇಳಿಕೆ ಸಮಂಜಸವಲ್ಲ, ಕೂಡಲೇ ಸಿಎಂ ಈ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹಣದ ಪ್ರಯೋಗ ಅಧಿಕಾರದ ಪ್ರಯೋಗ ಹಾಗೂ ಆಪರೇಷನ್ ಕಮಲ ಮಾಡುವುದು ಹೇಗೆ ಎಂಬುದು ಬಿಎಸ್ವೈಗೆ ಗೊತ್ತಿದೆ. ಬಿಎಸ್ವೈ ಈ ಹೇಳಿಕೆ ವಾಪಸ್ ಪಡೆಯಲೇಬೇಕು. ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ರಾಜ್ಯ ಚುನಾವಣಾ ಆಯೋಗ ಮನವಿ ಮಾಡುತ್ತೇವೆ ಎಂದರು.