ಮೈಸೂರಿನಲ್ಲಿ ಜಮೀರ್ ಹೇಳಿಕೆ ಮೈಸೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಆರೋಪ ಮತ್ತು ಪ್ರತ್ಯಾರೋಪಗಳು ಮುನ್ನೆಲೆಗೆ ಬರುತ್ತಿವೆ. ಈಗ ತೆಲಂಗಾಣದಲ್ಲಿ ಕರ್ನಾಟಕ ಚುನಾವಣಾ ರಾಜಕೀಯ ವಿಷಯ ಸದ್ದು ಮಾಡಿದ್ದು, ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಷಡ್ಯಂತ್ರ ಆರಂಭಿಸಿದ್ದಾರೆ ಎಂದು ಸ್ವತಃ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿರುವುದು ಗೊತ್ತಿರುವ ವಿಚಾರ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಚಿವ ಜಮೀರ್ ಅಹಮದ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಯಾವ ಆಫರ್ ಬಂದಿಲ್ಲ ಎಂದ ಜಮೀರ್:500 ಕೋಟಿ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ಜಮೀರ್ ಅಹಮದ್, ’’ನನಗಂತೂ ಯಾವ ಆಫರ್ ಬಂದಿಲ್ಲ. ನಾನು ತೆಲಂಗಾಣ ಸಿಎಂ ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ಆಫರ್ ಬಗ್ಗೆ ಗೊತ್ತಿಲ್ಲ. ನಾನು ಹೈದರಾಬಾದ್ ಗೆ ಹೋಗಿದ್ದು ನಿಜ. ಕೆಸಿಆರ್ ಭೇಟಿ ಮಾಡಿದ್ದೂ ನಿಜ. ನಮ್ಮ ಭೇಟಿಯಲ್ಲಿ ರಾಜಕೀಯ ವಿಷಯವೇ ಚರ್ಚೆಗೆ ಬಂದಿಲ್ಲ‘‘ ಎಂದು ಹೇಳಿದ್ದಾರೆ.
’’ತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ್ ಭೇಟಿ ಮಾಡಿ ಎಂದು ಕೇಳಿಕೊಂಡ್ರು. ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ, ಏನೂ ಸಂಬಂಧವೇ ಇಲ್ಲ. ಯಾರು ಆರೋಪ ಮಾಡಿದ್ದಾರೆ ಅವರನ್ನ ಕೇಳಿ. ನಿಖರವಾಗಿ ನನ್ನ ಹೆಸರನ್ನೇ ಹೇಳಿಲ್ಲ. ಹೀಗಾಗಿ ಯಾವುದೇ ಕ್ರಮದ ಬಗ್ಗೆ ಯೋಚನೆ ಮಾಡಲ್ಲ. ಬಹಳ ಜನ ಕೆಸಿಆರ್ ಅನ್ನು ಭೇಟಿ ಮಾಡಿದ್ದಾರೆ. ಅದು ಪ್ರಚಾರ ಆಗಿಲ್ಲ, ನನ್ನದು ಪ್ರಚಾರ ಆಗಿದೆ. ಮಾಧ್ಯಮಗಳು ನನ್ನ ವಿಚಾರ ಅಂದ್ರೆ ಜಾಸ್ತಿ ಪ್ರಚಾರ ಮಾಡ್ತಾರೆ. ಹೈದರಾಬಾದ್ನ ನಮ್ಮ ಅಧ್ಯಕ್ಷರೂ ನನ್ನ ಹೆಸರು ಹೇಳಿದ್ದಾರಾ ಹೇಳಿ‘‘ ಅಂತಾ ಮಾಧ್ಯಮಗಳಿಗೆ ಜಮೀರ್ ಅಹಮ್ಮದ್ ಪ್ರಶ್ನಿಸಿದರು.
ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?: ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಈ ಆರೋಪಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ್ದರು. ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಯಾರು ಭೇಟಿಯಾಗಿದ್ದಾರೆಂಬುದು ನನಗೆ ಗೊತ್ತಿಲ್ಲ. ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು. ಇದರಲ್ಲಿ ಏನು ತಪ್ಪು ಎಂದು ಪ್ರಶ್ನಿಸಿದ್ದರು.
‘‘ಕಾಂಗ್ರೆಸ್ ಗೆಲ್ಲದಂತೆ ನೋಡಿಕೊಳ್ಳಲು 500 ಕೋಟಿ ರೂಪಾಯಿಗಳ ಆಫರ್ ಬಗ್ಗೆಯೂ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೋಲಿಸಲು ಯಾರು ಸುಫಾರಿ ಕೊಟ್ಟಿದ್ದಾರೆ?. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರು ಇರಿಸುವುದರಿಂದ ಅವರಿಗೆ ಏನು ಸಿಗುತ್ತದೆ?. ಕೆಎಸ್ಆರ್ ಹೋರಾಟ ಇರುವುದು ಕಾಂಗ್ರೆಸ್ ವಿರುದ್ಧವಲ್ಲ ಬಿಜೆಪಿ ಜೊತೆ. ಕೆಸಿಆರ್ ಅವರ ಟಾರ್ಗೆಟ್ ಬಿಜೆಪಿಯನ್ನು ಸೋಲಿಸುವುದಾಗಿದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಸೋಲಿಸಲು ಸುಫಾರಿ ನೀಡಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಇದು ನನಗಂತೂ ಗೊತ್ತಿಲ್ಲ. ನನಗೆ ಹಣದ ವಿಚಾರವೂ ಗೊತ್ತಿಲ್ಲ. ಯಾರು ಹೇಳಿದ್ದರೋ ಅವರನ್ನೇ ಕೇಳಿ’’ ಎಂದು ಹೆಚ್ಡಿ ಕುಮಾರಸ್ವಾಮಿ ರೇವಂತ್ ರೆಡ್ಡಿ ಆರೋಪವನ್ನು ತಳ್ಳಿ ಹಾಕಿದ್ದರು. ಈಗ ಮಾಜಿ ಸಚಿವ ಜಮೀರ್ ಅಹಮ್ಮದ್ ಇದಕ್ಕೆ ಪ್ರತಿಯಿಸಿದ್ದು, ರೇವಂತ್ ರೆಡ್ಡಿ ಆರೋಪವನ್ನು ತಳ್ಳಿ ಹಾಕಿದರು.
ಏನಿದು ಪ್ರಕರಣ?: ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೇವಂತ್ ರೆಡ್ಡಿ, ಕರ್ನಾಟಕ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದರು. ತೆಲಂಗಾಣದ ಖಮ್ಮಂನಲ್ಲಿ ನಡೆದ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ಸಭೆಯಲ್ಲಿ ಪ್ರಮುಖವಾದ ವ್ಯಕ್ತಿಯೊಬ್ಬರು ಕಾಣಲಿಲ್ಲ. ಬಿಆರ್ಎಸ್ ಸಭೆಗೆ ಕುಮಾರಸ್ವಾಮಿ, ದೇವೇಗೌಡರು ಯಾಕೆ ಬರಲಿಲ್ಲ ಎಂದು ಕೆಸಿಆರ್ ಹೇಳಲಿ ನೋಡೋಣ. ಇಲ್ಲವೇ, ನಾನು ಹೇಳುತ್ತಿರುವುದನ್ನು ಕೆಸಿಆರ್ ಖಂಡಿಸಲಿ ನೋಡೋಣ ಎಂದು ಸವಾಲು ಹಾಕಿದ್ದರು.
ಓದಿ:ಕೇಂದ್ರದ ವಿರುದ್ಧ ಹೋರಾಡಲು ಕೆಸಿಆರ್ ರೆಡಿ: ಬಿಎಸ್ಆರ್ ಬೃಹತ್ ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಘೋಷಣೆ