ಮೈಸೂರು : ಚುನಾವಣೆಗೂ ಮುನ್ನ ಕಾಂಗ್ರೆಸ್ನವರು ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದ್ದರು. ಈಗ ತಮಿಳುನಾಡಿಗೆ ನೀರನ್ನು ಬಿಟ್ಟು ಈ ಹಕ್ಕನ್ನು ಡಿಎಂಕೆಗೆ ಒತ್ತೆ ಇಟ್ಟಿದ್ದಾರೆ. ಈಗ ಇಂಡಿಯಾದಲ್ಲಿ ಒಡಕು ಬರಬಾರದು ಎಂದು ರಾಜ್ಯ ಹಾಳಾದರು ಪರವಾಗಿಲ್ಲ ಎಂಬ ನೀತಿಗೆ ಕಾಂಗ್ರೆಸ್ನವರು ಬಂದು, ನಮ್ಮ ರೈತರ ಹಕ್ಕನ್ನು ಕಿತ್ತುಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿ ಟಿ ರವಿ ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ನ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ 'ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ, ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಗೂ ಮುನ್ನ ನಮ್ಮ ನೀರು, ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದ್ದರು. ಈಗ ತಮಿಳುನಾಡಿಗೆ ನೀರು ಬಿಟ್ಟು ಹಕ್ಕನ್ನು ಡಿಎಂಕೆಗೆ ಒತ್ತೆ ಇಟ್ಟಿದ್ದಾರೆ. ಅವರು ನೀರು ಕೇಳುವುದಕ್ಕಿಂತ ಮುಂಚೆಯೇ ನೀರು ಬಿಟ್ಟಿದ್ದಾರೆ. ಏಕೆಂದರೆ ಇಂಡಿಯಾದಲ್ಲಿ ಒಡಕು ಬರಬಾರದು ಎಂದು. ನಮ್ಮ ರಾಜ್ಯದ ನೀರು ಖಾಲಿಯಾದರೂ ಪರವಾಗಿಲ್ಲ. ನಮ್ಮ ರೈತರಿಗೆ ಅನ್ಯಾಯವಾದರೂ ಪರವಾಗಿಲ್ಲ, ಇಂಡಿಯಾ ಟೀಮ್ನಲ್ಲಿ ಒಡಕು ಬರಬಾರದು ಎಂಬುದು ಇವರ ನೀತಿಯಾಗಿದೆ ಎಂದು ಸಿ ಟಿ ರವಿ ಕಾಂಗ್ರೆಸ್ ಪಕ್ಷದವರಿಗೆ ರಾಜ್ಯದಲ್ಲಿ ಬರಗಾಲ ಇದ್ದರೂ ಸಂಭ್ರಮ ಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉಚಿತ ವಿದ್ಯುತ್ ನೀಡುತ್ತೇನೆ ಎಂದು ಮಹಾದೇವಪ್ಪನಿಗೂ, ಕಾಕಾಪಾಟೀಲ್ಗೂ ಬರೆ ಹಾಕುತ್ತಿದ್ದಾರೆ. ಚುನಾವಣೆಗೂ ಮುಂಚೆ ಮುಖ್ಯಮಂತ್ರಿಯವರು ಗೃಹ ಜ್ಯೋತಿ, ಉಚಿತ ವಿದ್ಯುತ್ ಪ್ರತಿ ಮನೆಗೂ ನೀಡುತ್ತೇವೆ ಎಂದಿದ್ದರು. ಜೊತೆಗೆ ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಅಂದಿದ್ದರು. ಈಗ ಮಹದೇವಪ್ಪಗೂ ಬರೆ, ಕಾಕಾ ಪಾಟೀಲ್ ಗೂ ಬರೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅಗಾಧ ಅನುಭವವಿದೆ. ಮೂಲಸೌಕರ್ಯ, ಉದ್ಯೋಗ ಕುರಿತ ಯಾವ ಯೋಜನೆಗಳನ್ನು ಕಾಂಗ್ರೆಸ್ ಮಾಡಿಲ್ಲ. ರಾಜಕೀಯವಾಗಿ ಗುತ್ತಿಗೆದಾರರನ್ನು ಬಳಸಿಕೊಂಡರು. ಈಗ ಅವರಿಗೆ ಬಿಲ್ ಮಾಡಿಕೊಡದೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರ ಇಲ್ಲದಿದ್ದಾಗ ಮಹದಾಯಿ ಬಗ್ಗೆ ಮಾತನಾಡಿದ್ದರು. ಈಗ ಅದರ ಬಗ್ಗೆ ಸೊಲ್ಲು ಎತ್ತುತ್ತಿಲ್ಲ. ಎಸ್ಸಿ, ಎಸ್ಟಿ ಹಣವನ್ನೂ ದುರ್ಬಳಕೆ ಮಾಡಿಕೊಂಡು ದಲಿತರ ಹಿತಾಸಕ್ತಿಯನ್ನು ಮರೆತರು. ದಲಿತ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ, ಇದರ ಬಗ್ಗೆ ಧ್ವನಿ ಎತ್ತಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ ಟಿ ವಾಗ್ದಾಳಿ ನಡೆಸಿದರು.