ಮೈಸೂರು:ಕೊರೊನಾ ಕಂಟ್ರೋಲ್ ಮಾಡಿ ಅಂದ್ರೆ, ಚಪ್ಪಾಳೆ ತಟ್ಟಿ, ಜಾಗಟೆ ಬಾರ್ಸಿ, ದೀಪ ಹಚ್ಚಿ ಅಂತ ಮೋದಿ ಅಂತಾರೆ. ದೇಶ ಆರ್ಎಸ್ಎಸ್ ಕ್ಯಾಂಪಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನ ಉದಯಗಿರಿಯ ಖೂಬಾ ಕೋವಿಡ್ ಹೆಲ್ಪ್ ಸೆಂಟರ್ನಲ್ಲಿ ಕೆಪಿಸಿಸಿ ವೈದ್ಯರ ಘಟಕ ಆಯೋಜಿಸಿದ್ದ ಪ್ಲಾಸ್ಮಾ ದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ದಿನ ಮಹಾಭಾರತ ಯುದ್ಧ ನಡೆಯಿತು. ಕೋವಿಡ್ ಓಡಿಸಲು 21 ದಿವಸ ಸಾಕು ಅಂದಿದ್ದ ಪ್ರಧಾನಿ ಮೋದಿ ಅವರು ಕೊರೊನಾ ಕಂಟ್ರೋಲ್ ಮಾಡಿದ್ರಾ ಎಂದು ಕುಟುಕಿದರು.
ನ್ಯೂಜಿಲೆಂಡ್ನಲ್ಲಿ ಕೊರೊನಾ ಸೊನ್ನೆ ಇದೆ. ದಕ್ಷಿಣ ಕೊರಿಯಾದಲ್ಲಿ ಕೊರೊನಾ ಬೆಳವಣಿಗೆಯಾಗುತ್ತಿಲ್ಲ. ಆದರೆ, ನಮ್ಮ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದೊಂದು ದಿನ ಕೊರೊನಾ ಪ್ರಕರಣದಲ್ಲಿ ಅಮೆರಿಕಾವನ್ನು ಭಾರತ ಮೀರಿಸಲಿದೆ ಎಂದರು.
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಪ್ರಧಾನಿ ಮೋದಿ ಅವರು ಹೊಸ ಯೋಜನೆ ರೂಪಿಸಲು ಚರ್ಚಿಸುತ್ತಿಲ್ಲ. ನವಿಲುಗಳಿಗೆ ಆಹಾರ ಹಾಕೊಂಡು ಕುಳಿತಿದ್ದಾರೆ. ಬೇಜವಾಬ್ದಾರಿ ಸರ್ಕಾರ ನಡೆಸುತ್ತಿದ್ದಾರೆ. ವಿರೋಧ ಪಕ್ಷದವರು ಇದನ್ನು ಕೇಳಿದ್ರೆ ಟೀಕೆ ಮಾಡುತ್ತಿದ್ದಾರೆ ಎನ್ನುತ್ತಾರೆ. ರಾಜ್ಯ ಸರ್ಕಾರ ಕೊರೊನಾ ವಿಚಾರವನ್ನಿಟ್ಟುಕೊಂಡು ಲೂಟಿ ಮಾಡುತ್ತಿದೆ. ವೆಂಟಿಲೇಟರ್,ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಲಂಚ ಪಡೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಟೀಕಿಸಿದರು.