ಮೈಸೂರು: ವಿಧಾನಸಭಾ ಚುನಾವಣೆಗೆ ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ ಮಾಜಿ ಶಾಸಕ ವಾಸು, ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂಬಂಧ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹಗೆತನಕ್ಕೆ ಅನೇಕರು ಬಲಿಯಾಗಿದ್ದಾರೆ. ನಾನು ಸೋತಿದ್ದೆ ನಿಜ, ಸಿದ್ದರಾಮಯ್ಯ ಅವರು ಸಿಎಂ ಆಗಿಯೇ ಸೋತಿಲ್ಲವೇ. ಸಿಇಸಿ ಕಮಿಟಿಯಲ್ಲಿ ವೀರಪ್ಪ ಮೊಯ್ಲಿ ಒಬ್ಬರೇ ಇದ್ದರು. ಎಲ್ಲರೂ ನನ್ನ ಪರ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಎರಡು ಕಡೆ ಟಿಕೆಟ್ ಕೇಳಿರಲಿಲ್ಲವೇ. ಒಂದು ಕಡೆ ಸಿದ್ದರಾಮಯ್ಯಗೆ ಟಿಕೆಟ್ ಕೈ ತಪ್ಪಿಲ್ಲವೇ ಎಂದ ಅವರು ಟಿಕೆಟ್ ಮಿಸ್ ಆಗಿದ್ದಕ್ಕೆ ನನಗೆ ಬೇಸರ ಇಲ್ಲ. ಸೋತಾಗಲೂ ನಾನು ಕುಗ್ಗಿಲ್ಲ. ನನಗಿದ್ದ ವಿಜನ್ ಈಡೇರಿಸಲು ಆಗಲಿಲ್ಲ ಅನ್ನೋ ಬೇಸರ ಇದೆ ಎಂದರು.
ನನಗೆ ಟಿಕೆಟ್ ಸಿಗದಂತೆ ಮಾಡಿದ್ದು ಸಿದ್ದರಾಮಯ್ಯ. ನಾನು ನೇರವಾಗಿ ಮಾತನಾಡುತ್ತಿದ್ದೆ. ತಪ್ಪುಗಳನ್ನು ಪ್ರಶ್ನೆ ಮಾಡುತ್ತಿದ್ದೆ. ಇಂತಹ ಹಲವು ಕಾರಣಗಳು ಇರಬಹುದು. ಕೆಲವು ವಿಚಾರಗಳನ್ನ ನಾನು ಖಂಡಿಸಿದ್ದೇನೆ. ಹೀಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಬಾರಿ ನಾನು ಸೋಲಲು ಸಿದ್ದರಾಮಯ್ಯನವರೇ ಕಾರಣ. ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇಲ್ಲಿ ಯಾವುದೇ ಮಾನದಂಡ ಬರಲಿಲ್ಲ. ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದವಿವಾದಗಳು ನಡಿತಾ ಇದ್ದವು. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ರೆ ನಾನು ನಿವೃತ್ತಿಗೆ ಸಿದ್ದ, ಡಂಡ ಕಟ್ಟಲು ಸಿದ್ಧ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿಯಾಗಲಿ ಸಾರ್ವಜನಿಕ, ಸರ್ಕಾರದ ಪ್ರಾಪರ್ಟಿಯನ್ನು ಅನಧಿಕೃತ ತೆಗೆದುಕೊಂಡಿದ್ರೆ ನಾನು ಸರ್ಕಾರಕ್ಕೆ ಬರೆದು ಕೊಡ್ತೀನಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ:'ಕೈ' ಹಿಡಿದ ಶೆಟ್ಟರ್; ಲಿಂಗಾಯತ ಮತದಾರರನ್ನು ಕಟ್ಟಿ ಹಾಕಲು ಕಮಲ ಕಲಿಗಳ ರಣತಂತ್ರ, ನಾಳೆ ಹುಬ್ಬಳ್ಳಿಗೆ ನಡ್ಡಾ..