ಮೈಸೂರು: ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಜೆಡಿಎಫ್(ಫ್ಯಾಮಿಲಿ) ಪಕ್ಷ ಅಂತಾರೆ. ಹಾಗಿದ್ರೆ ವರುಣಾದಲ್ಲಿ ಸಿದ್ದರಾಮಯ್ಯ ಫ್ಯಾಮಿಲಿನಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಮಗ ಬಿಟ್ಟರೆ, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವೇ? ಅವರಿಗೆ ಟಿಕೆಟ್ ಕೊಡಿಸಿ, ನಾವು ಕುಟುಂಬ ರಾಜಕಾರಣ ಮಾಡಲ್ಲ ಅಂತಾ ಸಿದ್ದರಾಮಯ್ಯ ತೋರಿಸಬೇಕಾಗಿತ್ತು. ಆದರೆ, ಅವರು ಆ ರೀತಿ ಮಾಡಲಿಲ್ಲ. ಸಿದ್ದರಾಮಯ್ಯನವರಿಗೂ ಗೊತ್ತು ಎಲ್ಲರ ಮನೆ ದೋಸೇನೂ ತೂತು ಎಂದು ಕುಟುಕಿದರು.
‘ಸಮ್ಮಿಶ್ರ ಸರ್ಕಾರ ರಚಿಸಿದ್ದಕ್ಕೆ ನಮ್ಮ ಪಕ್ಷ ನೆಲ ಕಚ್ಚಿತು’
ನಾವೆಲ್ಲಾ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರು ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಆದರೆ, ಸಾಲಮನ್ನಾ ಮಾಡಲು ಅವರು ಸಹಕಾರ ಕೊಡಲಿಲ್ಲ ಎಂದು ಆರೋಪಿಸಿದ್ರು. ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಜೆಡಿಎಸ್ ಮುಳುಗೇ ಹೋಯ್ತು ಅಂತಾ ಹೇಳ್ತಾರೆ. ಹಿಂದಿನ ಬೆಳವಣಿಗೆ ನೋಡಿದ್ರೆ, ಜೆಡಿಎಸ್ ಎಂತಹ ಸವಾಲುಗಳನ್ನು ಎದುರಿಸಿದೆ. ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಯಿತು ಎಂದು ದೂರಿದ್ರು. ಜೆಡಿಎಸ್ ಮುಳುಗಿಸುತ್ತೇನೆ ಎಂದು ಹೊರಟವರ ಸ್ಥಿತಿ ಇಂದು ಏನಾಗಿದೆ ಅಂತಾ ಇತಿಹಾಸ ಹೇಳುತ್ತೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
‘ಆರ್ಎಸ್ಎಸ್ ಬಗ್ಗೆ ವಾಸ್ತವ ಹೇಳಿದ್ರೆ ಅದು ತಪ್ಪು’
ಬಿಜೆಪಿಯವರು ಸ್ವಚ್ಚ ಭಾರತ ಅಂತಾರೆ. ಆದ್ರೆ, ಉತ್ತರ ಕರ್ನಾಟಕದಲ್ಲಿ ಜನ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗೋದು ತಪ್ಪಿಲ್ಲ, ಇದೇ ಸ್ವಚ್ಛ ಭಾರತನಾ? ಎಂದು ಕಿಡಿಕಾರಿದ್ರು. ಆರ್ಎಸ್ಎಸ್ ಬಗ್ಗೆ ವಾಸ್ತವಾಂಶ ಹೇಳಿದ್ರೆ ಅದು ತಪ್ಪು ಎಂದು ಬಿಜೆಪಿಯವರು ಅಪಪ್ರಚಾರ ಮಾಡ್ತಾರೆ ಅಂತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.