ಮೈಸೂರು :ನಾನು ಯಾವುದೇ ಪಕ್ಷದ ಓಲೈಕೆಯಲ್ಲಿಲ್ಲ. ಎರಡು ರಾಜಕೀಯ ಪಕ್ಷಗಳನ್ನ ರಾಜ್ಯದಿಂದ ಕಿತ್ತು ಹಾಕುವ ಸುಪಾರಿಯನ್ನ ಜನರಿಂದ ಪಡೆದಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಆರೋಪಕ್ಕೆ ಹೆಚ್ಡಿಕೆ ತಿರುಗೇಟು : ಬಿಜೆಪಿ ಸುಪಾರಿ ಪಡೆದು ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನು ಯಾವುದೇ ಪಕ್ಷದ ಓಲೈಕೆಯಲಿಲ್ಲ. ಎರಡು ರಾಜಕೀಯ ಪಕ್ಷಗಳನ್ನ ಈ ರಾಜ್ಯದಿಂದ ಕಿತ್ತು ಹಾಕುವ ಸುಪಾರಿಯನ್ನ ಜನರಿಂದ ಪಡೆದಿದ್ದೇನೆ. ಯಾವುದೇ ಸಮಾಜದ ಓಲೈಕೆಗೂ ರಾಜಕಾರಣ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಮತ್ತೆ ಸಿಎಂ ಆಗುವ ಆಸೆ ಇಲ್ಲ : ಇಂದು ಮೈಸೂರಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಚರ್ಚಾ ಸಭೆ ನಡೆಸುತ್ತಿದ್ದು, ಇದು ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಪ್ರತಿ ಹೋರಾಟ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರ ಶಾಂತಿ, ನೆಮ್ಮದಿಗಾಗಿ ಹೋರಾಟ ಅಷ್ಟೇ.. ಪ್ರತಿ ವಿಚಾರಕ್ಕೂ ಹೆಚ್ಡಿಕೆ ಹಿಟ್ ವಿಕೆಟ್ ಆಗುತ್ತಾರೆ ಎಂಬ ಸಚಿವ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನಗೆ ಪೂರ್ಣ ಬಹುಮತ ಸಿಗದಿರಬಹುದು. ಆದರೆ, ದೇವರ ದಯೆಯಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ಮತ್ತೆ ಸಿಎಂ ಆಗುವ ಆಸೆ ಇಲ್ಲ. ರಾಜ್ಯದ ಜನರ ಹಿತಕ್ಕಾಗಿ ಮಾತನಾಡುತ್ತೇನೆ ಅಷ್ಟೇ ಎಂದರು.