ಮೈಸೂರು:ಪ್ರಧಾನಿ ಮೋದಿ ದೇಶದ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದಾರೆ. ಅವರು ದೇಶವನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಶ್ರಮವಹಿಸುವ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದರು.
ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಶ್ರಮವಹಿಸುತ್ತಿದ್ದಾರೆ. ಅವರಿಗೆ ಚಾಮುಂಡೇಶ್ವರಿ ದೇವಿ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.
ಅಧಿಕಾರಿಗಳ ತಂಡ ಸಜ್ಜು
ಕೊರೊನಾ ಸೋಂಕಿನ ನಡುವೆಯೂ ಮುಖ್ಯಮಂತ್ರಿಗಳು ಕಟ್ಟುನಿಟ್ಟಾಗಿ ದಸರಾ ಆಚರಿಸಲು ಮುಂದಾಗಿದ್ದು, ಮಹೋತ್ಸವ ಆಚರಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ ಎಂದರು.
ವಿಜಯನಗರದ ಅರಸರ ಕಾಲದಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ದಸರಾ ಹಬ್ಬ ಕಾಲಕಾಲಕ್ಕೆ ಪರಿವರ್ತನೆಗೆ ಕಾರಣವಾಗಿದೆ. ಈ ಪರಿವರ್ತನೆಗೆ ದಿವಾನರು ಕಾರಣವಾಗಿದ್ದಾರೆ. ಮಹಾರಾಜರು ಮತ್ತು ಮಹಾರಾಣಿಯವರು ಜನರ ಬಗ್ಗೆ ಕಾಳಜಿ ಹೊಂದಿದ್ದರು. ಇದಕ್ಕೆ ಚೆಲುವಾಂಬ ಆಸ್ಪತ್ರೆಯೇ ಸಾಕ್ಷ್ಯ ಎಂದು ಎಸ್ಎಂಕೆ ಅಭಿಪ್ರಾಯಪಟ್ಟರು.
ಭಾರತ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ಚೀನಾದ ನಡುವೆ ಪೈಪೋಟಿಯಿದೆ. ಮತ್ಸರವಿಲ್ಲದ ಸ್ಪರ್ಧೆ ಸ್ವಾಗತರ್ಹ ಎಂದು ಅವರು ಹೇಳಿದರು.
ದಸರಾ ಪ್ಯಾಕೇಜ್ ಟೂರ್ ಮಾಡಿ
ದಸರಾ ಹಬ್ಬವನ್ನು ಪ್ರವಾಸವನ್ನಾಗಿ ರೂಪಿಸಬೇಕು. ಮುಂದಿನ ವರ್ಷದ ವೇಳೆಗೆ ಮೈಸೂರನ್ನು ಪ್ಯಾಕೇಜ್ ರೂಪಿಸಿದರೆ ಅನುಕೂಲವಾಗುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಸಂಪನ್ಮೂಲವಾಗಿ ರೂಪುಗೊಳ್ಳುತ್ತದೆ. ಹಾಗಾಗಿ, ದಸರಾ ಪ್ರವಾಸ ಪ್ಯಾಕೇಜ್ ರೂಪಿಸಿ ಎಂದು ಸಿಎಂ ಬೊಮ್ಮಾಯಿಗೆ ಎಂ.ಎಸ್. ಕೃಷ್ಣ ಸಲಹೆ ನೀಡಿದರು.