ಮೈಸೂರು : ಇಂದು ಜನರೇ ಮೊಬೈಲ್ ಹಿಡಿದುಕೊಂಡು ಪತ್ರಕರ್ತರಾಗುತ್ತಿದ್ದಾರೆ. ಯಾರಿಗಾದರೂ ಬೈದು ಮಾತನಾಡುವಾಗ ಅದನ್ನ ಎಡಿಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಯಾವುದೋ ಸಣ್ಣಪುಟ್ಟ ತಪ್ಪುಗಳಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಅದನ್ನು ಬಿಟ್ಟು ತಮಗೆ ಬೇಕಾದಷ್ಟನ್ನ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮನವಿ ಮಾಡಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಿನ್ನೆ ವರುಣಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆದಿದೆ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ, ಆ ವಿಡಿಯೋದಲ್ಲಿ ಪ್ರತಾಪ್ ಸಿಂಹಗೆ ತರಾಟೆ ಎಂದು ಹಾಕಲಾಗಿದೆ.
ಇದನ್ನೂ ಓದಿ:ಇಷ್ಟು ದಿನ ಹಿಂದಿ ಹೇರಿಕೆ ಅಂದರು, ಈಗ ಅಮೂಲ್ ಹೇರಿಕೆ ಎನ್ನುತ್ತಿದ್ದಾರೆ : ಪ್ರತಾಪಸಿಂಹ
ಸತ್ಯವನ್ನು ಮರೆ ಮಾಚುತ್ತಿರುವುದು ಸರಿಯಲ್ಲ: ಆದರೆ ತಮಗೆ ಬೇಕಾಗಿರುವುದನ್ನು ವಿಡಿಯೊ ಎಡಿಟ್ ಮಾಡಿ ಹಾಕಲಾಗುತ್ತಿದ್ದು, ಈ ರೀತಿ ಮಾಡುವುದು ಸರಿಯಲ್ಲ. ಇತ್ತೀಚೆಗೆ ಜನರೇ ಮೊಬೈಲ್ ಹಿಡಿದು ಪತ್ರಕರ್ತರಾಗುತ್ತಿದ್ದಾರೆ. ಆದರೆ, ಬೈದ ವಿಡಿಯೋವನ್ನು ಮಾತ್ರ ಹಾಕಿ, ಸತ್ಯ ಮರೆಮಾಚಿ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುತ್ತಿದ್ದಾರೆ. ಇದು ಒಂದು ಒಳ್ಳೆಯ ಬೆಳವಣಿಗೆ. ಆದರೂ ಸತ್ಯವನ್ನು ಮರೆಮಾಚುತ್ತಿರುವುದು ಸರಿಯಲ್ಲ ಎಂದು ಹೇಳಿದರು.