ಮೈಸೂರು:ಅರಣ್ಯದಲ್ಲಿ ಜೇನು ಕೀಳಲು ಹೋದ ಹಾಡಿ ಯುವಕರ ಮೇಲೆ ಅರಣ್ಯ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಹೆಚ್.ಡಿ.ಕೋಟೆ ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯಲ್ಲಿ ಕೇಳಿ ಬಂದಿದೆ.
ಘಟನೆ ವಿವರ:ಶುಕ್ರವಾರ ಸಂಜೆ ಹೆಡಿಯಾಲ ಅರಣ್ಯ ಪ್ರದೇಶದ ಬಾವಿಕೆರೆ ಹಾಡಿಯ ಜೇನು ಕುರುಬ ಜನಾಂಗದ 8 ಜನ ಯುವಕರು ಜೇನು ಕೀಳಲು ಅರಣ್ಯಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜೇನು ಕೀಳುವಾಗ ಬೆಂಕಿ ಹಾಕಿದ್ದು, ಈ ಹೊಗೆಯನ್ನು ಕಂಡ ಅರಣ್ಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಆಗ ಅಧಿಕಾರಿಗಳನ್ನು ಕಂಡ ಯುವಕರು ಕಾಡಿನಲ್ಲಿ ಅವಿತುಕೊಂಡಿದ್ದರಿಂದ 3 ಬೈಕ್ಗಳನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಇಲಾಖೆಗೆ ಮರಳಿದ್ದಾರೆ. ಆದರೆ, ತಮ್ಮ ಬೈಕ್ಅನ್ನು ಹಿಂಪಡೆಯಲು ಅರಣ್ಯ ಇಲಾಖೆಗೆ ಹೋದ ಕುಮಾರ, ಸುರೇಶ, ರಾಮ, ಮಾದ, ಗಣೇಶ, ಕುಮಾರ ಹಾಗೂ ಇಬ್ಬರು ಅಪ್ರಾಪ್ತರಿಗೆ ಇಲಾಖೆಯ ಸಿಬ್ಬಂದಿ ಅಮಾನುಷವಾಗಿ ಥಳಿಸಿದ್ದು, ಅದರಲ್ಲಿ 4 ಜನರನ್ನು ತಮ್ಮ ವಶದಲ್ಲೇ ಉಳಿಸಿಕೊಂಡು ಉಳಿದ 4 ಜನರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.