ಮೈಸೂರು:ವಿದೇಶದಲ್ಲಿ ಪ್ರಾಣಿಗಳಿಗೂ ಕೊರೊನಾ ಸೋಂಕು ತಗುಲಿರುವುದರಿಂದ ನಮ್ಮ ರಾಜ್ಯದಲ್ಲಿರುವ ಮೃಗಾಲಯ ಹಾಗೂ ಅಭಯಾರಣ್ಯದಲ್ಲಿ ನಿಗಾ ವಹಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.
ನಮ್ಮ ರಾಜ್ಯದಲ್ಲಿ ಸದ್ಯ ಮನುಷ್ಯರಿಗೆ ಬಂದಿರುವ ಸೋಂಕು ಕಡಿಮೆಯಾಗುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆಲ್ಲಾ ಕೊರೊನಾ ಬರುವುದಿಲ್ಲ. ಈಗಾಗಲೇ ರಾಜ್ಯದಲ್ಲಿನ ಮೃಗಾಲಯಗಳನ್ನು ಬಂದ್ ಮಾಡಿದ್ದು, ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.
ಲಾಕ್‌ಡೌನ್ ಹಿನ್ನೆಲೆ ಅರಣ್ಯದಲ್ಲಿ ಕಳ್ಳತನ ಹಾಗೂ ಬೇಟೆಯಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಅಂತಹವರ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಎರಡು ಮೂರು ಕಡೆ ಪ್ರಕರಣ ನಡೆದಿವೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಹೆಚ್.ಡಿ.ಕೋಟೆಯಲ್ಲಿ ಇಬ್ಬರು ಅರಣ್ಯ ಸಿಬ್ಬಂದಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿನ್ನೆಲೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಹಿರಿಯ ಅಧಿಕಾರಿಗಳೇ ಮೃತ ಸಿಬ್ಬಂದಿಯನ್ನು ಮೀನು ಹಿಡಿಯಲು ಕಳುಹಿಸಿದ್ದೆರೆಂಬ ಆರೋಪ ಇದೆ. ಮತ್ತೊಂದೆಡೆ ಮೀನುಗಾರರ ಹಾವಳಿ ಕೂಡ ಇದೆ ಎಂಬ ಮಾತುಗಳಿವೆ. ಈ ಸಂಬಂಧ ಪ್ರತ್ಯಕ್ಷದರ್ಶಿಗಳು ಹಾಗೂ ಬದುಕುಳಿದ ಇಬ್ಬರು ಸಿಬ್ಬಂದಿಯನ್ನ ವಿಚಾರಣೆ ಮಾಡಲಿದ್ದೇನೆ. ತಪ್ಪು ಮಾಡಿದ್ದರೆ ಸೂಕ್ತ ಕ್ರಮ ಜರಗುಸುತ್ತೇವೆ ಎಂದರು.