ನಾಲೆ ಪೈಪ್ಲೈನ್ನಲ್ಲಿ ಸಿಲುಕಿದ್ದ ಎರಡು ಚಿರತೆಗಳ ರಕ್ಷಣೆ ಮೈಸೂರು: ಆಹಾರ ಅರಸಿ ನಾಡಿಗೆ ಬಂದ ಚಿರತೆ ಹಾಗೂ ಅದರ ಮರಿ ನಾಲೆಯ ಪೈಪ್‌ನಲ್ಲಿ ಸಿಲುಕಿತ್ತು. ಈ ಸುದ್ದಿ ತಿಳಿದು ಕಾರ್ಯಾಚರಣೆ ನಡೆಸಿದ ಚಿರತೆ ಸೆರೆ ಕಾರ್ಯಪಡೆ ಅವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇಲವಾಲ ಹೋಬಳಿಯ ರಾಮನಹಳ್ಳಿಯಲ್ಲಿ ಭಾನುವಾರ ರಾತ್ರಿ ಚಿರತೆಗಳು ನಾಲೆಯ ನೀರು ಹರಿಸಲು ಹಾಕಿದ್ದ 300 ಮೀಟರ್ ಉದ್ದದ ಖಾಲಿ ಪೈಪ್‌ನಲ್ಲಿ ಸಿಲುಕಿದ್ದವು. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಚಿರತೆ ಸೆರೆ ಕಾರ್ಯಾಚರಣೆ ತಂಡ ಹಾಗು ಪಶು ವೈದ್ಯರು, ಬೋನ್ ಹಾಕಿ ಚಿರತೆಗಳನ್ನು ಸೆರೆಹಿಡಿದರು. ನಂತರ ಆರೋಗ್ಯ ಪರಿಶೀಲಿಸಿ ಕಾಡಿಗೆ ರವಾನಿಸಿದ್ದಾರೆ.
"ಕಳೆದ ವರ್ಷ ಇದೇ ಪೈಪ್‌ಲೈನ್ ಒಳಗೆ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ಜಾನುವಾರು ಹಾಗೂ ಕುರಿ, ಮೇಕೆಗಳನ್ನು ಮೇಯಿಸಲು ಈ ಪ್ರದೇಶಗಳಿಗೆ ಬರುತ್ತಾರೆ. ಇಲ್ಲಿಗೆ ಬರುವ ಕುರಿ, ಮೇಕೆಗಳ ಆಸೆಗೆ ಬೇಟೆಯಾಡಲು ಚಿರತೆಗಳು ಬರುತ್ತವೆ. ಕಳೆದ ಎರಡು ದಿನಗಳ ಹಿಂದೆ ಚಿರತೆಯೊಂದು ಇದೇ ಪ್ರದೇಶದಲ್ಲಿ ಎರಡು ಮೇಕೆಗಳ ಮೇಲೆ ದಾಳಿ ಮಾಡಿತ್ತು. ಅದರಂತೆಯೇ ನಿನ್ನೆ ಆಹಾರ ಅರಸಿ ಬಂದ ಸಂದರ್ಭದಲ್ಲಿ ತಾಯಿ ಹಾಗೂ ಅದರ ಮರಿ ಪೈಪ್‌ಲೈನ್ ಒಳಗೆ ಸಿಲುಕಿಕೊಂಡಿರುವ ಶಂಕೆ ಇದೆ" ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಆರ್ಎಫ್ಓ ಸುರೇಂದ್ರ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಎಸಿಎಫ್ ಲಕ್ಷ್ಮಿಕಾಂತ್, ಪಶುವೈದ್ಯ ಡಾ.ಮದನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ 70 ಕೆ.ಜಿ ತೂಕದ ಚಿರತೆ ಸೆರೆ: ವಿಡಿಯೋ