ಮೈಸೂರು :ಕೇಂದ್ರದ ಹೆಸರಾಂತ ಸಂಸ್ಥೆ ಸಿಎಫ್ಟಿಆರ್ಐ ವತಿಯಿಂದ ’’ಒಂದು ವಾರ ಒಂದು ಪ್ರಯೋಗಾಲಯ, ಆಹಾರ ಸಂಶೋಧನೆಯ ಸಂಭ್ರಮೋತ್ಸವದ‘‘ ಭಾಗವಾಗಿ ಏರ್ಪಡಿಸಿದ್ದ ಎರಡು ದಿನಗಳ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಇಲ್ಲಿಗೆ ಭೇಟಿ ನೀಡಿದ ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಇಲ್ಲಿನ ವಿವಿಧ ರೀತಿ ಆಹಾರೋತ್ಪನ್ನ ತಯಾರಿಸುವ ವಿಶೇಷ ಯಂತ್ರಗಳು, ಆಹಾರ ತಯಾರಿ ಪ್ರಕ್ರಿಯೆ ಚಟುವಟಿಕೆಗಳನ್ನು ಕಂಡು ನಿಬ್ಬೆರಗಾದರು. ಸಿಎಫ್ಟಿಆರ್ಐ ಆಹಾರ ಮಾದರಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮನಸೋತರು.
"ನಿಮ್ಮ ಆಹಾರ ನಮ್ಮ ಕಾಳಜಿ" ಎಂಬ ಸಂದೇಶದೊಂದಿಗೆ ವಿಶೇಷ ಯಂತ್ರಗಳು ಮತ್ತು ಆಹಾರ ತಯಾರಿ ಪ್ರಕ್ರಿಯೆ ಚಟುವಟಿಕೆಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಸಕ್ತ ಸಾರ್ವಜನಿಕರು ಮತ್ತು ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವ ಮೂಲಕ ಆಹಾರೋತ್ಪನ್ನಗಳನ್ನು ತಯಾರಿಸುವ, ಸಂಸ್ಕರಿಸುವ ಹೊಸ ಯಂತ್ರಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿಯನ್ನು ತಿಳಿದು ಕೊಂಡರು. ಒಂದೇ ಗಂಟೆಯಲ್ಲಿ 400 ದೋಸೆಗಳನ್ನು ತಯಾರಿಸುವ ಎಲ್ಬಿಜಿ ಆಧಾರಿತ ಸ್ವಯಂಚಾಲಿತ ಮಿಷಿನ್ ಕೂಡ ಪ್ರಮುಖ ಆಕರ್ಷಣೆಯಾಗಿತ್ತು.
ಸ್ವಯಂ ಚಾಲಿತ ಆಯಿಲ್ ಸ್ಪ್ರೈಯೊಂದಿಗೆ ರೋಲಿಂಗ್ ಪ್ರಕ್ರಿಯಲ್ಲಿ ದೋಸೆಗಳನ್ನು ತಯಾರಿಸುವುದು ಇದರ ಕಾರ್ಯ ವಿಧಾನವಾಗಿದೆ. ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರದಲ್ಲಿ ಪೆಡಲ್, ಬ್ಲೋರ್ವ ಹಾಗೂ ಪ್ರತ್ಯೇಕಗೊಳಿಸುವ ಕೊಳವೆ ಹೀಗೆ 3 ಭಾಗಗಳಿವೆ. ಪೆಡಲ್ ತುಳಿಯುತ್ತಿದ್ದಂತೆ, ಅದಕ್ಕೆ ಜೋಡಿಸಿರುವ ಚಿಕ್ಕ ಫ್ಯಾನ್ ತಿರುಗಲು ಆರಂಭವಾಗುತ್ತದೆ. ಅದರ ಮೇಲ್ಭಾಗದಲ್ಲಿ ಚಿಕ್ಕದಾದ ಕಿಂಡಿಯಿದ್ದು, ಅದಕ್ಕೆ ಕಾಳನ್ನು ಸುರಿದರೆ ಕಾಳು ಮತ್ತು ಹೊಟ್ಟು ಬೇರ್ಪಡುತ್ತದೆ. ಇದರಿಂದ ದೇಹಕ್ಕೆ ವ್ಯಾಯಾಮವೂ ಆಗುತ್ತದೆ.