ಕರ್ನಾಟಕ

karnataka

ETV Bharat / state

ಕಪಿಲಾ ಸೇತುವೆ ಮುಳುಗಡೆ, ದೇಗುಲಗಳು ಜಲಾವೃತ, ಮೈಸೂರು ಊಟಿ ಹೆದ್ದಾರಿ ಬಂದ್ - ದೇವಸ್ಥಾನಗಳು ಜಲಾವೃತ

ಕಬಿನಿ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ನಂಜನಗೂಡು ಕಪಿಲಾ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಹಲವು ದೇವಸ್ಥಾನಗಳು ಜಲಾವೃತಗೊಂಡಿವೆ.

ದೇವಾಲಯಗಳು ಜಲಾವೃತ

By

Published : Aug 9, 2019, 12:46 PM IST

ಮೈಸೂರು: ಕಬಿನಿ ನದಿ ಪ್ರವಾಹಕ್ಕೆ ದಕ್ಷಿಣ ಕಾಶಿ ನಂಜನಗೂಡಿನ ಬಳಿ ಹಲವು ದೇವಸ್ಥಾನಗಳು ಜಲಾವೃತಗೊಂಡಿದ್ದು, ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಊಟಿ ಹೆದ್ದಾರಿ ಬಂದ್ ಮಾಡಲಾಗಿದೆ.

ವಯನಾಡು ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ನಾಗರಹೊಳೆ ವ್ಯಾಪ್ತಿಯಲ್ಲಿರುವ ತಾರಕ ಹಾಗೂ ಕಬಿನಿ ಜಲಾಶಯ ತುಂಬಿದ್ದು ಹೊರ ಹರಿವು ಹೆಚ್ಚಾಗಿದೆ.

ಕಬಿನಿ ನದಿ ಪ್ರವಾಹದಿಂದ ಹಲವು ದೇವಸ್ಥಾನಗಳು ಜಲಾವೃತ

ಹಲವು ದೇವಾಲಯಗಳು ಜಲಾವೃತ:
ಜಲಾಶಯದಿಂದ ನೀರು ಬಿಟ್ಟ ಹಿನ್ನಲೆಯಲ್ಲಿ ಕಬಿನಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ.

ನಂಜನಗೂಡಿನ ಮೂಲಕ ಹಾದು ಹೋಗುವ ಮೈಸೂರು ಊಟಿ ಹಾಗೂ ಕೇರಳ ಹೆದ್ದಾರಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ. ನಂಜನಗೂಡಿನ ಬಳಿ ನದಿ ಪಾತ್ರದಲ್ಲಿರುವ 7 ದೇವಾಲಯಗಳು ಹಾಗೂ 1 ಮಂಟಪ ಜಲಾವೃತಗೊಂಡಿದ್ದು, ಅದರಲ್ಲಿ 16 ಕಾಲು ಮಂಟಪ, ಮಲ್ಲೇ ಮೂಲೆಮಠ, ನಿಂಗಾಭುದಿ ದೇವಸ್ಥಾನ, ಕಾಶಿ ವಿಶ್ವನಾಥ ದೇವಾಲಯ, ಪರಶುರಾಮ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ದತ್ತಾತ್ರೇಯ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ನೀರಿನಲ್ಲಿ ಮುಳುಗಿವೆ.

ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ ಬಳಿಯ ದಾಸೋಹ ಭವನಕ್ಕೂ ನೀರು ತುಂಬಿಕೊಂಡಿದೆ. ಈಗಾಗಲೇ ಜಿಲ್ಲಾಡಳಿತ ಪ್ರವಾಹ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗಲು ಎಚ್ಚರಿಕೆ ನೀಡಿದ್ದು ಹಲವೆಡೆ ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ.

ಕಬಿನಿ ಜಲಾಶಯದಿಂದ 1.20ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ನಂಜನಗೂಡಿನ ಕಪಿಲಾ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಸುತ್ತೂರಿನಿಂದ ತಿ.ನರಸೀಪುರ, ನಂಜನಗೂಡು ಸೇರಿದಂತೆ ಹಲವು ಸ್ಥಳಗಳಿಗೆ ತೆರಳಲು ಜನರು ಹರಸಾಹಸ ಪಡುವಂತಾಗಿದೆ.

ಪ್ರವಾಹದ ಬಗ್ಗೆ ಸಮಸ್ಯೆಗಳು ಕೇಳಿ ಬರುತ್ತಿರುವುದರಿಂದ ಕಂಟ್ರೋಲ್ ರೂಂಗೆ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತಕ್ಷಣ ಜಾರಿಗೆ ಬರುವಂತೆ ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ತಹಶೀಲ್ದಾರ್ ನಿಶ್ಚಯ್ ಅವರು ಪಾಳಿಯ ಒಂದರಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ‌. ಮಧ್ಯಾಹ್ನ 2 ರಿಂದ ರಾತ್ರಿ 10ರ ವರೆಗೆ ತಹಶೀಲ್ದಾರ್ ಶಿವಶಂಕರಪ್ಪ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಅವರನ್ನು ನಿಯೋಜಿಸಲಾಗಿದೆ. ಪಾಳಿಯ 3 ರಲ್ಲಿ ರಾತ್ರಿ 10 ರಿಂದ ಬೆಳ್ಳಗ್ಗೆ 6ರ ವರೆಗೆ ತಹಶೀಲ್ದಾರ್ ಪ್ರಕಾಶ್ ಹಾಗೂ ಶಿವಕುಮಾರ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details