ಮೈಸೂರು:ಚಿನ್ನಾಭರಣ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ 5 ತಂಡಗಳನ್ನು ರಚನೆ ಮಾಡಲಾಗಿದೆ.
ಕಳೆದ ದಿನ ಸಂಜೆ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ನಾಲ್ವರು ದರೋಡೆಕೋರರು ದಾಳಿ ನಡೆಸಿ ಸಿಕ್ಕ ವಸ್ತುಗಳನ್ನು ದೋಚಿದ್ದರು. ಈ ಸಂದರ್ಭದಲ್ಲಿ ಚಿನ್ನ ಖರೀದಿಗೆ ಬಂದಿದ್ದ ಗ್ರಾಹಕ ಚಂದ್ರು ಎಂಬವರ ಮೇಲೂ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದರು. ಅಷ್ಟೇ ಅಲ್ಲದೆ ಅಂಗಡಿ ಮಾಲೀಕ ಧರ್ಮೇಂದ್ರ ಅವರನ್ನು ಥಳಿಸಿ ಗಂಭೀರವಾಗಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು.
ಇದನ್ನೂ ಓದಿ: ಮೈಸೂರು ಚಿನ್ನದ ಅಂಗಡಿಯಲ್ಲಿ ದರೋಡೆ ಯತ್ನ ಪ್ರಕರಣ.. ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ..
ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ವಿದ್ಯಾರಣ್ಯಪುರಂ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಂಡವನ್ನು ಕರೆಸಿ ತನಿಖೆ ನಡೆಸಿದ್ದರು. ಬಳಿಕ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹಾಗೂ ಡಿಸಿಪಿ ಗೀತಾ ಪ್ರಸನ್ನ ಸ್ಥಳ ಪರಿಶೀಲನೆ ನಡೆಸಿದ್ದು, ಮೂರು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಮಾಹಿತಿ ಹಾಗೂ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.
ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾವಚಿತ್ರವನ್ನು ನಗರ ಪೊಲೀಸ್ ಆಯುಕ್ತರು ಬಿಡುಗಡೆ ಮಾಡಿದ್ದಾರೆ. ಶೀಘ್ರವೇ ಆರೋಪಿಗಳ ಬಂಧನಕ್ಕೆ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಐದು ತಂಡವನ್ನು ರಚಿಸಲಾಗಿದೆ.