ಮೈಸೂರು:ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ವಾಸಿಸುತ್ತಿರುವ ಪಣಿಯನ್ ಬುಡಕಟ್ಟಿನ ಸಮುದಾಯದ ಯುವತಿಯೊಬ್ಬರು ಮೊದಲ ಬಾರಿಗೆ ಡಾಕ್ಟರೇಟ್ ಪದವಿ ಪಡೆದು ಹಿರಿಮೆಗೆ ಪಾತ್ರರಾಗಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಪಂ ವ್ಯಾಪ್ತಿಯ ಸೇಬಿನಕೊಲ್ಲಿ ಹಾಡಿ ಪ್ರದೇಶದಲ್ಲಿ ನೆಲೆಸಿರುವ ರಾಜು ಮತ್ತು ಲಕ್ಷ್ಮಿ ದಂಪತಿ ಪುತ್ರಿ ಎಸ್.ಆರ್. ದಿವ್ಯ ಅವರು ತಮ್ಮ ಸಮುದಾಯದಲ್ಲಿಯೇ ಪ್ರಥಮ ಬಾರಿಗೆ ಪಿಎಚ್‌ಡಿ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ. ಮೇತ್ರಿ ಅವರ ಮಾರ್ಗದರ್ಶನದಲ್ಲಿ ''ಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನ'' ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರಾಜು ಮತ್ತು ಲಕ್ಷ್ಮಿ ದಂಪತಿಗೆ, ದಿವ್ಯ, ದೀಬು ಹಾಗೂ ದೀಬ ಮೂರು ಮಕ್ಕಳಿದ್ದು, ಅರಣ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳ ನಡುವೆ ಇವರ ತಂದೆ ತಾಯಿ ಅಂದಿನ ದಿನಗಳಲ್ಲಿ 75 ರೂಪಾಯಿಗೆ ಕೂಲಿ ಕೆಲಸ ಮಾಡಿಕೊಂಡು ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು.
ಆರ್ಥಿಕ ಹೊರೆಯಿಂದ ದಿವ್ಯ ಅವರ ಸಹೋದರ ದೀಬು 10ನೇ, ಸಹೋದರಿ ದೀಬ 7ನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ತೆರಳಿದ್ದರು. 1ನೇ ತರಗತಿಯಿಂದ 9ನೇ ತರಗತಿಯವರಗೆ ಡಿ.ಬಿ. ಕುಪ್ಪೆಯಲ್ಲಿ ಶಿಕ್ಷಣ ಮುಗಿಸಿದ ದಿವ್ಯ, ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ, ದೀಪದ ಬೆಳಕಿನಲ್ಲಿಯೇ ಓದಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರೌಢಶಾಲೆ, ಪಿಯುಸಿ, ಪದವಿ ಶಿಕ್ಷಣವನ್ನು ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು ಮುಗಿಸಿದರು.
ಮೈಸೂರಿನ ಛಾಯಾದೇವಿ ಬಿಇಡಿ ಕಾಲೇಜಿನಲ್ಲಿ ಬಿಇಡಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಎಂಎ ಪದವಿಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಬಳಿಕ ಅಲ್ಲಿಯೇ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಪಣಿಯನ್ ಸಮುದಾಯದಲ್ಲಿ ಮೊಟ್ಟ ಮೊದಲ ಬಾರಿ ಪಿಚ್ಡಿ ಪದವಿ ಪಡೆದುಕೊಂಡ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ.