ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷರ ಕೊಠಡಿಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ. ತಕ್ಷಣ ಮುಡಾ ಸಿಬ್ಬಂದಿ ಬೆಂಕಿ ನಿರೋಧಕ ಯಂತ್ರದ ಸಹಾಯದಿಂದ ನಂದಿಸಲು ಯತ್ನಿಸಿದ್ದಾರೆ. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸುವ ಮೂಲಕ ಭಾರಿ ಅನಾಹುತ ತಪ್ಪಿಸಿದ್ದಾರೆ.
ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಚೆನ್ನಕೇಶವ ಮಾತನಾಡಿ, ನಾವು ಬರುವ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದೆವು. ಅಷ್ಟೊತ್ತಿಗೆ ಕೊಠಡಿ ತುಂಬಾ ಹೊಗೆ ತುಂಬಿಕೊಂಡು ಎಸಿ ಸುಟ್ಟು ಹೋಗಿತ್ತು. ಗೋಡೆಗಳು ಮತ್ತು ಸೀಲಿಂಗ್ ಕಪ್ಪಾಗಿವೆ. ಯಾವುದೇ ಹೆಚ್ಚಿನ ಹಾನಿ ಆಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಆಗಿರಬಹುದು ಎಂದು ಮಾಹಿತಿ ನೀಡಿದರು.
ಶಾರ್ಟ್ ಸರ್ಕ್ಯೂಟ್‌ನಿಂದ ಶಾಲೆಯ ವಸ್ತುಗಳು ಭಸ್ಮ: ಮೈಸೂರು ಜಿಲ್ಲೆಯ ನಂಜನಗೂಡು ನಗರದ 18ನೇ ಕ್ರಾಸ್ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ನಡೆದಿತ್ತು. ದಸರಾ ರಜೆ ಮುಗಿಸಿಕೊಂಡು ಶಾಲೆಗಳು ಪ್ರಾರಂಭವಾಗಿರುವುದರಿಂದ ಶಿಕ್ಷಕರು ಶಾಲೆಯ ಕಚೇರಿಯ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸುಮಾರು 2 ಲಕ್ಷ ರೂ.ಗೂ ಹೆಚ್ಚು ಬೆಳೆಬಾಳುವ ಮುಖ್ಯ ಶಿಕ್ಷಕರ ಕಚೇರಿಯಲ್ಲಿದ್ದ ಕಂಪ್ಯೂಟರ್, ಮಾನಿಟರ್, ಪ್ರಿಂಟರ್, ಸ್ಕ್ಯಾನರ್, ಸಿಸಿ ಕ್ಯಾಮರಾ, ಬಿಎಸ್‌ಎನ್‌ಎಲ್ ಫೋನ್ ಸೇರಿದಂತೆ ಹಲವು ದಾಖಲಾತಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿತ್ತು. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್: ನಂಜನಗೂಡಿನ ಕಸ್ತೂರಬಾ ವಿದ್ಯಾಲಯದ ಎಲೆಕ್ಟ್ರಾನಿಕ್ ಉಪಕರಣಗಳು ಭಸ್ಮ