ಕರ್ನಾಟಕ

karnataka

ETV Bharat / state

ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿಗಳ ವಿರುದ್ಧ ಪ್ರಕರಣ​ ದಾಖಲು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ.ಸುಧಾರಾವ್, ಪ್ರೊ. ಕೆ.ಎಸ್.ರಂಗಪ್ಪ ಹಾಗೂ ಪ್ರೊ. ಎಂ.ಜಿ.ಕೃಷ್ಣನ್ ಇವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FIR registered in Former VC of Karnataka State Open University
ಕುಲಪತಿಗಳ ಮೇಲೆ ಎಫ್​ಐಆರ್​ ದಾಖಲು

By

Published : Dec 21, 2019, 1:32 PM IST

Updated : Dec 21, 2019, 2:05 PM IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ.ಸುಧಾರಾವ್, ಪ್ರೊ. ಕೆ.ಎಸ್.ರಂಗಪ್ಪ ಹಾಗೂ ಪ್ರೊ. ಎಂ.ಜಿ.ಕೃಷ್ಣನ್ ಇವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್​ಐಆರ್​ ಪ್ರತಿ

ಕರಾಮುವಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ವರದಿಯ ಆಧಾರದ ಮೇಲೆ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ), 409 (ಸರ್ಕಾರಿ ಉದ್ಯೋಗಿಯಾಗಿ ನಂಬಿಕೆ ದ್ರೋಹ), 420 (ವಂಚನೆ) ಮತ್ತು 34 (ಅಪರಾಧ ಸಂಚು) ಅನ್ವಯ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ 2016ರಲ್ಲಿ ಇದೇ ಸಮಿತಿಯ ವರದಿ ಆಧರಿಸಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು.

ಕರಾಮುವಿಯು ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳನ್ನು ಆರಂಭಿಸಲು ಐಇಎಂ ಮತ್ತು ಸ್ಕೂಪ್ ಎಂಬ ಸಂಸ್ಥೆಗಳ ಜತೆ 2010ರ ಬಳಿಕ ಐದು ಬಾರಿ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅನುಮತಿ ಪಡೆದಿರಲಿಲ್ಲ. ಅಲ್ಲದೇ ‘ಇಂಟಿಗ್ರೇಟೆಡ್ ವೆಬ್‌ ಬೇಸ್ಡ್​ ಸಿಸ್ಟಮ್’ ಜಾರಿಗೆ ಐಇಎಂ ಸಂಸ್ಥೆಗೆ 2012ರಲ್ಲಿ 1 ಕೋಟಿ ರೂಪಾಯಿ ಮುಂಗಡ ಹಣ ನೀಡಿರುವುದರಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

2003 ರಿಂದ 2007ರವರೆಗೆ ವಿವಿ ಕುಲಪತಿಯಾಗಿದ್ದ ಪ್ರೊ. ಕೆ.ಸುಧಾರಾವ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸುಧಾರಾವ್ ಅವರು ತಮ್ಮ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಕುರಿತು ರಾಜ್ಯ ಸರ್ಕಾರದ ಸಲಹೆ ಪಡೆಯದೆ ಖಾಸಗಿ ಸಂಘ-ಸಂಸ್ಥೆ, ಟ್ರಸ್ಟ್‌ಗಳ ಜತೆ ಒಪ್ಪಂದ ಮಾಡಿಕೊಂಡಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಡಿಯ ನಿಯಂತ್ರಣ ಸಂಸ್ಥೆಗಳು ನೀಡಿರುವ ನಿರ್ದೇಶನಗಳನ್ನು ಪಾಲಿಸದೆ, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಮೀರಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕರಾಮುವಿ ಈಗಿನ ಕುಲಸಚಿವ ರಮೇಶ್ ಅವರು ಜಯಲಕ್ಷ್ಮಿಪುರಂ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Dec 21, 2019, 2:05 PM IST

ABOUT THE AUTHOR

...view details