ಮೈಸೂರು:ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಎಎಸ್ಐ ಸೇರಿದಂತೆ 8 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುವತಿ ಆತ್ಮಹತ್ಯೆಗೂ ಮುನ್ನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆದರೆ ಪೊಲೀಸರು ಆಕೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಶಿವರಾಜು ಕರ್ತವ್ಯ ಲೋಪ ಎಸಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಸುರೇಶ್, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಸೇರಿ ಎಎಸ್ಐ ಶಿವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ:
ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದ ಯುವತಿಯನ್ನು ಅದೇ ಗ್ರಾಮದ ಲೋಕೇಶ್ ಎಂಬಾತ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಮಧ್ಯೆ ಸುರೇಶ್ ಎಂಬಾತ ಆಕೆಯ ಜೊತೆ ಮಾತನಾಡಿ ಮಧ್ಯಪ್ರವೇಶಿಸಿದ್ದಕ್ಕೆ ಲೋಕೇಶ್, ಯುವತಿಯಿಂದ ದೂರಾಗಿದ್ದಾನೆ ಎನ್ನಲಾಗಿದೆ.
ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ ಲೋಕೇಶ್ ನಂತರ ಬೆಂಗಳೂರಿನಲ್ಲಿ ಸೆಟಲ್ ಆಗಿ ಮೋಸ ಮಾಡಿದ್ದಾನೆ. ನ್ಯಾಯ ಒದಗಿಸುವಂತೆ ಮೃತ ಯುವತಿಯ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಕೊಟ್ಟ ನಂತರ ಲೋಕೇಶ್ ತನ್ನ ಪ್ರಿಯತಮೆಯ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು.
ಮನೆಯವರು ಆಕೆಯ ಅಂತ್ಯಕ್ರಿಯೆ ನೆರವೇರಿಸಿ 11 ದಿನಗಳ ಕಾರ್ಯ ಮಾಡಿದ ನಂತರ ಮನೆ ಸ್ವಚ್ಛ ಮಾಡುವಾಗ ಆಕೆ ಬರೆದ ಡೆತ್ನೋಟ್ ದೊರಕಿತ್ತು. ಲೋಕೇಶ್ ವಂಚಿಸಿದ್ದು, ಸುರೇಶ್ ಹೆದರಿಸಿದ ವಿಚಾರವನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಳು. ತನ್ನ ಸಾವಿಗೆ ಲೋಕೇಶ್ ಕಾರಣವೆಂದು ಡೆತ್ನೋಟ್ನಲ್ಲಿ ಬರೆದಿರುವ ಯುವತಿ, ಲೋಕೇಶ್‌ಗೆ ಜೈಲು ಶಿಕ್ಷೆ ನೀಡಬೇಕು, ಆತನನ್ನು ಗಲ್ಲಿಗೆ ಏರಿಸಬೇಕೆಂದು ಮನವಿ ಮಾಡಿದ್ದಳು.
ಇದನ್ನೂ ಓದಿ:ಪ್ರೀತಿಯಲ್ಲಿ ವಂಚನೆ.. ಪ್ರಿಯಕರನನ್ನು ಗಲ್ಲಿಗೇರಿಸಿ ಎಂದು ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..