ಮೈಸೂರು: ಕೊರೊನಾ ಟೆಸ್ಟಿಂಗ್ ಸಮಯದಲ್ಲಿ ಸುಳ್ಳು ವಿಳಾಸ ಮತ್ತು ನಕಲಿ ಮೊಬೈಲ್ ನಂಬರ್ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆ ಜಿಲ್ಲಾಡಳಿತ ಅತಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ. ಕೊರೊನಾ ಟೆಸ್ಟಿಂಗ್ ವೇಳೆ ಕೆಲವರು ತಪ್ಪು ಮಾಹಿತಿ ನೀಡಿ ಆರೋಗ್ಯಾಧಿಕಾರಿಗಳನ್ನು ಯಾಮಾರಿಸುತ್ತಿದ್ದು, ಕೆಲವರು ಚಿಕಿತ್ಸೆ ಪಡೆಯದೆ ನಾಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದೆ ಎಂದು ತಿಳಿಸಿದರು.
30ಕ್ಕೂ ಹೆಚ್ಚಿನ ಸೋಂಕಿತರು ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಕ್ಕಿಲ್ಲ :ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್‌ಗಳನ್ನು ಎಲ್ಲಾ ಭಾಗಗಳಲ್ಲೂ ಚುರುಕುಗೊಳಿಸಲಾಗಿದೆ. ತಪಾಸಣೆ ವೇಳೆ 30ಕ್ಕೂ ಹೆಚ್ಚಿನ ಸೋಂಕಿತರು ತಪ್ಪು ವಿಳಾಸ ನೀಡಿದ್ದು, ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಕ್ಕಿಲ್ಲ. ಪರೀಕ್ಷೆ ವರದಿ ಪಾಸಿಟಿವ್ ಬಂದಾಗ ಆರೋಗ್ಯಾಧಿಕಾರಿಗಳು ಕರೆ ಮಾಡಿದರೆ ಬೇರೆ ಯಾರೋ ಕರೆ ಸ್ವೀಕರಿಸುತ್ತಾರೆ ಅಥವಾ ನಂಬರ್ ತಪ್ಪಾಗಿರುತ್ತದೆ. ವಿಳಾಸ ಹುಡುಕಿ ಹೋದರೆ ಅಲ್ಲಿಯೂ ಸೋಂಕಿತರು ಸಿಗುವುದಿಲ್ಲ. ಹೀಗೆ ಆರೋಗ್ಯಾಧಿಕಾರಿಗಳನ್ನು ಕೊರೊನಾ ಟೆಸ್ಟಿಂಗ್ ವೇಳೆ ತಪ್ಪು ಮಾಹಿತಿ ನೀಡಿ ಯಾಮಾರಿಸುತ್ತಿದ್ದಾರೆ ಎಂದರು.