ಕರ್ನಾಟಕ

karnataka

ETV Bharat / state

Mysuru Film city: ಚಿಗುರೊಡೆದ 'ಮೈಸೂರು ಫಿಲ್ಮ್​ ಸಿಟಿ' ಕನಸು: ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದೇನು?

ಮೈಸೂರಿನ ಹೊರಭಾಗದ ಇಮ್ಮಾವು ಬಳಿ 'ಫಿಲ್ಮ್​ ಸಿಟಿ' ನಿರ್ಮಾಣದ ಕುರಿತು ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಮಾತನಾಡಿದ್ದಾರೆ.

By

Published : Jun 22, 2023, 3:58 PM IST

Updated : Jun 22, 2023, 5:27 PM IST

Producer Sandesh Nagaraj
ನಿರ್ಮಾಪಕ ಸಂದೇಶ್ ನಾಗರಾಜ್

'ಮೈಸೂರು ಫಿಲ್ಮ್​ ಸಿಟಿ' ಬಗ್ಗೆ ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆ ಈಟಿವಿ ಭಾರತ್ ಪ್ರತಿನಿಧಿ ಮಾತುಕತೆ ನಡೆಸಿದರು.

ಮೈಸೂರು: ಸಾಂಸ್ಕೃತಿಕ ನಗರಿ ಹಾಗೂ ಸಿನಿಮಾ ಶೂಟಿಂಗ್‌ಗೆ ಪ್ರಶಸ್ತ ತಾಣವಾಗಿರುವ ಮೈಸೂರಿನ ಹೊರಭಾಗದಲ್ಲಿರುವ ಇಮ್ಮಾವು ಸಮೀಪ 'ಫಿಲ್ಮ್​ ಸಿಟಿ' ನಿರ್ಮಾಣದ ಕನಸು ಸದ್ಯದಲ್ಲೇ ನನಸಾಗುವ ಮುನ್ಸೂಚನೆ ಸಿಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಂತರ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ವ್ಯಾಪ್ತಿಯ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ, 2014ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ಚಿತ್ರ ನಗರಿ ನಿರ್ಮಾಣಕ್ಕೆ 110 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಆ ನಂತರ ಈ ವಿಚಾರ ಅಷ್ಟೊಂದು ಪ್ರಗತಿ ಕಂಡಿರಲಿಲ್ಲ. ಇದೀಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದು ಇಮ್ಮಾವಿನಲ್ಲಿ ಚಿತ್ರನಗರಿ ನಿರ್ಮಾಣದ ಕನಸು ಗರಿಗೆದರಿದೆ. ಈಗಾಗಲೇ ಸಿನಿಮಾ ರಂಗದ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಮ್ಮಾವಿನಲ್ಲಿ ಚಿತ್ರ ನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಹಾಗಾಗಿ, ಸಿಎಂ ಸಹ ವಿಶೇಷ ಒಲವು ತೋರಿಸಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಈಟಿವಿ ಭಾರತಕ್ಕೆ ತಿಳಿಸಿದರು.

ಮೈಸೂರಿನಲ್ಲಿ ಫಿಲ್ಮ್​ ಸಿಟಿ- ಅನುಕೂಲಗಳೇನು? :ಮೈಸೂರು ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣ. ಹಲವು ಭಾಷೆಗಳ ಸಿನಿಮಾಗಳು ಕೂಡಾ ಮೈಸೂರಿನ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣವಾಗಿವೆ. ನಗರದ ಸುತ್ತಮುತ್ತ 250ಕ್ಕೂ ಹೆಚ್ಚು ಸ್ಥಳಗಳು ಸಿನಿಮಾ ಚಿತ್ರೀಕರಣಕ್ಕೆ ಯೋಗ್ಯವಾಗಿವೆ. ಇಲ್ಲಿ ಹಾಲಿವುಡ್, ತಮಿಳು, ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಯ ಚಿತ್ರಗಳ ಚಿತ್ರೀಕರಣವಾಗಿವೆ. ಹೀಗಾಗಿ, ಮೈಸೂರಿನಲ್ಲಿ ಚಿತ್ರ ನಗರಿಯನ್ನೂ ಆರಂಭಿಸಿದರೆ ಪ್ರವಾಸೋದ್ಯಮವೂ ಅಭಿವೃದ್ಧಿ ಆಗುತ್ತದೆ. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಮೈಸೂರು ಟ್ರಾಫಿಕ್ ಸಮಸ್ಯೆ ಇಲ್ಲದ ನಗರವಾದ್ದರಿಂದ, ಇಲ್ಲಿ ಕಡಿಮೆ ಅವಧಿಯಲ್ಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಬಹುದು. ಪಾರಂಪರಿಕ ನಗರವೂ ಅಭಿವೃದ್ಧಿ ಆಗಲಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ, ಬೆಂಗಳೂರು- ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ಹಾಗೂ ಚೆನ್ನೈ ಮತ್ತು ಮೈಸೂರು ನಡುವೆ ವೇಗದ ರೈಲು ಸಂಪರ್ಕ ಇರುವುದರಿಂದ ಚಿತ್ರನಗರಿಗೆ ಅನುಕೂಲವಾಗುತ್ತದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಫಿಲ್ಮ್​ ಸಿಟಿ ನಿರ್ಮಾಣದ ಬಗ್ಗೆ ಆಗಿನ ಸಿಎಂ ರಾಮಕೃಷ್ಣ ಹೆಗಡೆ ಕಾಲದಿಂದಲೂ ಚರ್ಚೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ಮಾಡಬೇಕೋ ಅಥವಾ ಬೆಂಗಳೂರಿನಲ್ಲಿ ಮಾಡಬೇಕೋ ಎಂಬ ಚರ್ಚೆಗಳ ನಡುವೆ, ಮೈಸೂರಿನಲ್ಲಿಯೇ ಚಿತ್ರನಗರಿ ಆಗಬೇಕೆಂದು ಅಂಬರೀಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಈ ಹಿಂದೆ ತೀರ್ಮಾನವಾಗಿತ್ತು. ಆನಂತರ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವರುಣಾ ಕ್ಷೇತ್ರದ ಇಮ್ಮಾವು ಬಳಿ 110 ಎಕರೆ ಭೂಮಿ ಕೊಟ್ಟಿದ್ದರು. ಆದರೆ, ಆನಂತರ ಗಮನ ಹರಿಸಲಿಲ್ಲ.

ಇದನ್ನೂ ಓದಿ:ರಾಮಾಯಣ ಆಧಾರಿತ ಸಿನಿಮಾಗಿಲ್ಲ ಸ್ಪಂದನೆ: ಆದಿಪುರುಷ್​ ಗಳಿಕೆ ಇಳಿಕೆ!!

ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಅವರ ಕ್ಷೇತ್ರದಲ್ಲೇ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡಾ ಸಹಮತ ವ್ಯಕ್ತಪಡಿಸಿದ್ದು, ಬಜೆಟ್ ನಂತರ ತೀರ್ಮಾನ ಮಾಡೋಣ ಎಂದು ಹೇಳಿದ್ದಾರೆ.

Last Updated : Jun 22, 2023, 5:27 PM IST

ABOUT THE AUTHOR

...view details