ಮೈಸೂರು :ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ಮಾಡುತ್ತೇವೆ, ಹೊರಗಡೆ ಎಲ್ಲೂ ಮಾಡಲ್ಲ. ನಾನು ಹಿಂದೆಯೇ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡೋಣ ಅಂತ ಹೇಳಿದ್ದೆ. ಆದರೆ, ಪರಿಸರವಾದಿಗಳು ಬಿಡಲಿಲ್ಲ. ರೋಪ್ ವೇ ಮಾಡಲು ನಾನು ಈಗಲೂ ಸಿದ್ಧ. ಯಾರೂ ತಡೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುತ್ತೇನೆ ಎಂದು ಬಜೆಟ್ನಲ್ಲೇ ಹೇಳಿದ್ದೇನೆ. ಬೆಂಗಳೂರು - ಮೈಸೂರು ಹೈವೇ ಮಾಡಿದ್ದು ನಾವೇ, ನಾನು ಮತ್ತು ಮಹದೇವಪ್ಪ ಮಾಡಿದ್ದು. ನಿಮ್ಮ ಎಂಪಿ ಪ್ರತಾಪ್ ಸಿಂಹ ಬುರುಡೆ ಹೊಡೆಯುತ್ತಾನೆ ಎಂದು ಛೇಡಿಸಿದರು.
ಪ್ರತಾಪ್ ಸಿಂಹನ ಕ್ಷೇತ್ರ ಇರೋದು ಸಿದ್ದಲಿಂಗಪುರದವರೆಗೆ. ಅಲ್ಲಿಂದ ಆಚೆ ಇರೋದು ಯಾರು? ಅವರು ಸುಮ್ಮನೆ ಬುರುಡೆ ಹೊಡಿತಾರೆ. ನೀವು ಚಪ್ಪಾಳೆ ತಟ್ಟುತ್ತೀರಿ. ನಾನು ಬೆನ್ನು ತಟ್ಟಿಕೊಳ್ತಾ ಇಲ್ಲ. ನಾನು ಹೋದ ಮೇಲೆ ಮೈಸೂರು ಅಭಿವೃದ್ಧಿ ಆಗಿಲ್ಲ. ಮತ್ತೆ ಬಂದಿದ್ದೇನೆ, ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡುತ್ತೇನೆ, ಅದು ನನ್ನ ಜವಾಬ್ದಾರಿ. ಯಾರು ಏನೇ ವಿರೋಧ ಮಾಡಿದರೂ, ನಾವು ಹೇಳಿದಂತೆಯೇ ಮಾಡುತ್ತೇವೆ ಎಂದರು.
ಮೈಸೂರಿನ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಕಾರ್ಯಕ್ರಮವನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ರಜತ ಮಹೋತ್ಸವವನ್ನು ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನು ನಾನೇ ಮಾಡಬೇಕು ಅಂದುಕೊಂಡಿದ್ದೇನೆ. ನೂರು ವರ್ಷಕ್ಕಿಂತ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಸಿಎಂ ವ್ಯಕ್ತಪಡಿಸಿದರು.