ಮೈಸೂರು:ಮಡುವಿನಹಳ್ಳಿ ಹಾಗೂ ಕಂದೇಗಾಲ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಎರಡು ವರ್ಷದ ಹೆಣ್ಣು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಆತಂಕ ಈಗ ದೂರವಾಗಿದೆ. ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಸಹಾಯಕ ಅಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಚಿರತೆಯ ಚಲನವಲನ ಗಮನಿಸಿದ ಹೆಡಿಯಾಲ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಟ್ಟಿದ್ದರು. ಇದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದ ಅರಣ್ಯಕ್ಕೆ ಚಿರತೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲಸಕ್ಕೆ ಹೋಗಲು ಭಯ: ಸಿಂಧುವಳ್ಳಿ, ಕಳಲೆ ಸುತ್ತಮುತ್ತ ಚಿರತೆ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ರಾತ್ರಿ ಹೊತ್ತು ಜಮೀನು, ಗದ್ದೆಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು.
ಚಿರತೆ ದಾಳಿ-14 ಮೇಕೆಗಳು ಸಾವು:ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಇಲ್ಲಿನ ತೋಟದ ಮನೆಯಲ್ಲಿ ಕಟ್ಟಿದ್ದ 17 ಕುರಿಗಳು ಹಾಗೂ 14 ಮೇಕೆಗಳು ಸಾವಿಗೀಡಾಗಿದ್ದವು. ಮಲ್ಲೇಶ್ವರ ಗ್ರಾಮದ ಸುಶೀಲಮ್ಮ ಎಂಬವರ ತೋಟದ ಮನೆಯಲ್ಲಿ ಕಡೂರು ಪಟ್ಟಣದ ನಿವಾಸಿಗಳಾದ ಚಂದ್ರಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ್ ಎಂಬವವರು ತಮ್ಮ ಕುರಿಗಳನ್ನು ಕಟ್ಟಿದ್ದರು. ಇದರಿಂದಾಗಿ ನಾಲ್ಕು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಾಲೀಕರು ಹೇಳಿದ್ದಾರೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಉಮೇಶ್ ಭೇಟಿ ನೀಡಿ ಕುರಿಗಳ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು. ಕಡೂರು ಅರಣ್ಯಾಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂಓದಿ:ಹಾಸ್ಟೆಲ್ಗೆ ನುಗ್ಗಿದ ಚಿರತೆ ಸೆರೆ: 12 ಗಂಟೆಗಳ ಬಳಿಕ ನಿಟ್ಟುಸಿರುಬಿಟ್ಟ ವಿದ್ಯಾರ್ಥಿನಿಯರು