ಮೈಸೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಮೈಸೂರು ತಾಲೂಕಿನ ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಅಮಾನತು ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಉದಯಗಿರಿಯ ಮಾತಾ ಆಸ್ಪತ್ರೆಗೆ ಗುರುವಾರ ರಾತ್ರಿ ಭೇಟಿ ನೀಡಿದ ದಿನೇಶ್ ಗುಂಡೂರಾವ್, ಪರಿಶೀಲನೆ ವೇಳೆ ತಪ್ಪು ಮಾಹಿತಿ ನೀಡಿದ ಮೈಸೂರು ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಚ್ಚಿರುವ ಮಾತಾ ಆಸ್ಪತ್ರೆಯ ಮುಂಭಾಗದಲ್ಲೇ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಅವರನ್ನು, ಮೈಸೂರಿನ ಈ ಭಾಗದಲ್ಲಿ ಎಷ್ಟು ವರ್ಷದಿಂದ ಆಸ್ಪತ್ರೆ ನಡೀತಿದೆ?. ಭ್ರೂಣ ಹತ್ಯೆ ನಡೆಯುತ್ತಿರೋದು ಯಾಕೆ ನಿಮ್ಮ ಗಮನಕ್ಕೆ ಬಂದಿಲ್ಲ?. ಆಸ್ಪತ್ರೆಗೆ ನೋಟಿಸ್ ಯಾವಾಗ ನೀಡಿದ್ದೀರಿ ಎಂದೆಲ್ಲಾ ಸಚಿವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಉತ್ತರಿಸಿ, ಎರಡು ವರ್ಷಗಳಿಂದ ಆಸ್ಪತ್ರೆಯೇ ಇರಲಿಲ್ಲ, ಮುಚ್ಚಿತ್ತು ಎಂದು ತಪ್ಪು ಮಾಹಿತಿ ನೀಡಿದರು. ಇದಕ್ಕೆ ಸುಮ್ಮನಾಗದ ಸಚಿವರು, ಸ್ಥಳೀಯರನ್ನು ಕರೆದು ಮಾಹಿತಿ ಪಡೆದಾಗ, ಮೂರು ತಿಂಗಳಿಂದಷ್ಟೇ ಆಸ್ಪತ್ರೆ ಮುಚ್ಚಿದೆ. ಈ ಮೊದಲು ನಡೆಯುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲೇ ಡಾ.ರಾಜೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಾಜೇಶ್ವರಿ ಹಾಗೂ ಡಾ.ರವಿ ಅವರನ್ನು ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚನೆ ಕೊಟ್ಟರು.
ಒಂದು ತಿಂಗಳಲ್ಲಿ ಕ್ಲಿನಿಕ್ಗಳ ಶೋಧ:ಮೈಸೂರು ಜಿಲ್ಲೆಯಲ್ಲಿ ಒಟ್ಟು 1861 ನೋಂದಾಯಿತ ಕ್ಲಿನಿಕ್ ಹಾಗೂ 286 ಸ್ಕ್ಯಾನಿಂಗ್ ಕೇಂದ್ರಗಳಿವೆ. ಅವುಗಳಲ್ಲಿ ನೋಂದಣಿಯಾಗದ ಕ್ಲಿನಿಕ್ಗಳು ಸೇರಿವೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಪತ್ತೆಹಚ್ಚಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಶೋಧಕಾರ್ಯ ಆರಂಭಿಸಿವೆ. ಇಲಾಖೆ ಒಂದು ತಿಂಗಳಲ್ಲಿ ಶೋಧ ನಡೆಸುವ ಗುರಿ ಹೊಂದಿದೆ.
ತಾಲೂಕು ಆರೋಗ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಪೊಲೀಸರು ಸೇರಿದಂತೆ ತಂಡ ರಚನೆ ಮಾಡಲಾಗಿದ್ದು, ಅನುಮತಿ ಪಡೆಯದ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ. ಇದರ ಜೊತೆಗೆ ಕ್ಲಿನಿಕ್ಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಿಗೆ ಕೆಲವು ಸೂಚನೆಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ರವಾನಿಸಿದೆ. ಪ್ರತಿಯೊಬ್ಬ ವೈದ್ಯ ಹಾಗೂ ಕೇಂದ್ರಗಳು ತಾವು ಪಡೆದ ಪರವಾನಗಿಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡುವಂತೆ ತಿಳಿಸಲಾಗಿದೆ. ಮಾತ್ರವಲ್ಲದೆ ಪ್ರತಿಯೊಂದು ಸ್ಕ್ಯಾನಿಂಗ್ ಕೇಂದ್ರಗಳು ಭ್ರೂಣಲಿಂಗ ಪತ್ತೆ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಣೆ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಮೈಸೂರು ಜಿಲ್ಲೆಯಲ್ಲಿ ಆಯುರ್ವೇದ ಹಾಗೂ ನಾಟಿ ವೈದ್ಯರ ಮೇಲೆ ನಿಗಾ ಇಟ್ಟಿದ್ದು, ಅವರು ಯಾವ ರೀತಿ ಪರವಾನಗಿ ಪಡೆದಿರುತ್ತಾರೆ ಎಂಬುದನ್ನು ಪರಿಶೀಲನೆ ನಡೆಸಲು ಸಿದ್ಧತೆ ನಡೆದಿದೆ. ಒಂದು ತಿಂಗಳ ಒಳಗೆ ಮೈಸೂರು ಜಿಲ್ಲೆಯ ಎಲ್ಲಾ ಕ್ಲಿನಿಕ್ಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳನ್ನು ಪರಿಶೀಲನೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು ಎಂದು ಮೈಸೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕುಮಾರಸ್ವಾಮಿ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಮೈಸೂರಿನಲ್ಲಿ ದೂರು ದಾಖಲಾಗಿಲ್ಲ: ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಬೆಂಗಳೂರು ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಆದರೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಮೈಸೂರು ಮತ್ತು ಮಂಡ್ಯದಲ್ಲಿ ಬೆಳಕಿಗೆ ಬಂದಿದ್ದು, ಮೈಸೂರಿನ ಮಾತಾ ಆಸ್ಪತ್ರೆಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಆದರೆ ಈ ಬಗ್ಗೆ ಮೈಸೂರಿನಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಸ್ಥಳೀಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು ತನಿಖೆ ಮಾಡಲು ಅವಕಾಶವಿದ್ದರೂ, ಆ ಪ್ರಯತ್ನವನ್ನು ಸ್ಥಳೀಯ ಪೊಲೀಸರು ಮಾಡಿಲ್ಲ. ಈ ಮಧ್ಯೆ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ತನಿಖೆ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಈಗ ಕ್ಲಿನಿಕ್ಗಳು ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಮಂಡ್ಯ: ಭ್ರೂಣ ಪತ್ತೆ, ಹತ್ಯೆ ಪ್ರಕರಣ... ಘಟನಾ ಸ್ಥಳಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ