ಮೈಸೂರು :ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಶುರುವಾದ ಗಲಾಟೆ ಪುತ್ರನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬನ್ನಿಮಂಟಪದಲ್ಲಿ ನಡೆದಿದೆ. ಉಮೇಜ್ (23) ತಂದೆಯ ಕೈಯಿಂದಲೇ ಕೊಲೆಯಾದ ವ್ಯಕ್ತಿ ಎಂಬುದು ತಿಳಿದುಬಂದಿದೆ.
ಈತನ ತಂದೆ ಅಸ್ಲಂ ಪಾಷಾ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ತಾಯಿಯ ಫೋನ್ ಅನ್ನು ಅನುಮತಿ ಪಡೆಯದೇ ಉಮೇಜ್ ಬಳಸಿದ್ದಾರೆ. ಈ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ತದನಂತರ ಅಸ್ಲಂ ಪಾಷಾ ಚಾಕುವಿನಿಂದ ಮಗ ಉಮೇಜ್ಗೆ ಇರಿದು ಕೊಂದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಗನನ್ನು ಕೊಂದ ತಂದೆ ಅಸ್ಲಂ ಪಾಷಾ ಅವರನ್ನ ಎನ್ ಆರ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ್ದಕ್ಕೆ ದ್ವೇಷ; ವ್ಯಕ್ತಿಯನ್ನು ಹತ್ಯೆಗೈದು ಯುವಕ ಪರಾರಿ
ವ್ಯಕ್ತಿಯನ್ನು ಹತ್ಯೆ ಮಾಡಿ ಯುವಕ ಪರಾರಿ( ಬೆಂಗಳೂರು) :ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎಂಬ ಗಾದೆ ಮಾತಿನಿಂತೆ ಬೆಂಗಳೂರಿನ ಆನೇಕಲ್-ಹೊಸೂರು ಮುಖ್ಯ ರಸ್ತೆಯ ಸಮಂದೂರು ಗೇಟ್ ಬಳಿ (ನವೆಂಬರ್ 14-2023) ಕೊಲೆಯೊಂದು ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದರು. ತನ್ನ ತಾಯಿಯನ್ನು ಎಂಟು ವರ್ಷಗಳ ಹಿಂದೆ ಕೊಲೆ ಮಾಡಿದ ವ್ಯಕ್ತಿಯನ್ನು ಯುವಕನೊಬ್ಬ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿತ್ತು.
ಕೊಲೆಯಾದ ವ್ಯಕ್ತಿ ಸಮಂದೂರಿನ ನಾರಾಯಣಪ್ಪ ಎಂದು ಗುರುತಿಸಲಾಗಿತ್ತು. ಹತ್ಯೆ ಮಾಡಿದ ಯುವಕ ಮಧು ಎಂದು ತಿಳಿದು ಬಂದಿತ್ತು. ಮಧು ತಾಯಿಯನ್ನು 2015ರಲ್ಲಿ ಇದೇ ನಾರಾಯಣಪ್ಪ ಹತ್ಯೆ ಮಾಡಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ 3 ವರ್ಷದ ಹಿಂದೆ ಹೊರ ಬಂದಿದ್ದ. ನಾರಾಯಣಪ್ಪ ಮತ್ತು ಮಧು ಸಂಬಂಧಿಗಳಾಗಿದ್ದು, ಮಧು ಮನೆಯ ಹತ್ತಿರ 10-15 ದಿನದಿಂದ ನಾರಾಯಣಪ್ಪ ಗುರಾಯಿಸುತ್ತಿದ್ದ. ಹೀಗಾಗಿ ತನ್ನ ತಾಯಿಯನ್ನು ಕೊಂದವನೆಂಬ ದ್ವೇಷದಿಂದ ಕೊಲೆ ಮಾಡಿದ್ದಾನೆಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಆರೋಪಿ ಮಧು ಪರಾರಿಯಾಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದರು.
'ಹಳೇ ದ್ವೇಷದ ಹಿನ್ನೆಲೆ ನಡೆದ ವಾಗ್ವಾದ ಈ ಕೊಲೆಯಲ್ಲಿ ಅಂತ್ಯಗೊಂಡಿದೆ. ಘಟನೆ ಬಳಿಕ ಆರೋಪಿ ಮಧು ಎಸ್ಕೇಪ್ ಆಗಿದ್ದು ಆತನ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು' ಎಂದು ಗ್ರಾಮಾಂತರ ಅಡಿಷನಲ್ ಎಸ್ಪಿ ಎಂ ಎಲ್ ಪುರುಷೋತ್ತಮ್ ಅವರು ತಿಳಿಸಿದ್ದರು.