ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ವತಿಯಿಂದ ಸರ್ಕಾರದ ವಿರುದ್ಧ ಬಾರುಕೋಲು ಚಳುವಳಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ನಗರದ ಗನ್ ಹೌಸ್ ವೃತ್ತದಿಂದ ಹೊರಟ ಬಾರುಕೋಲು ಚಳುವಳಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ನಂತರ ಪ್ರಾದೇಶಿಕ ಆಯುಕ್ತರಿಗೆ ಕಾಯ್ದೆ ಹಿಂಪಡೆಯುವಂತೆ ಮನವಿ ಮಾಡಿದರು.
ಮೈಸೂರು-ಚಾಮರಾಜನಗರ ಮಂಡ್ಯ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಸದಸ್ಯರು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದರಿಂದ ಬಂಡವಾಳಶಾಹಿಗಳು, ಭೂ ಮಾಫಿಯಾದವರು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿ ಖರೀದಿಸಿ ಪಾಳು ಬಿಡುತ್ತಾರೆ. ಇದರಿಂದ ಕೃಷಿ ಕುಂಠಿತವಾಗುತ್ತದೆ ಎಂದು ಕಿಡಿಕಾರಿದರು.