ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ಮೈಸೂರು: ರೈತ ಮುಖಂಡರನ್ನು ಬಂಧಿಸುವ ಮೂಲಕ ಜಿಲ್ಲಾ ಗ್ರಾಮಾಂತರ ಪೊಲೀಸರು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ ದರ ನಿಗದಿ, ರೈತರ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರನ್ನು ಬೆಳಿಗ್ಗೆ ಮೂರು ಗಂಟೆಯಿಂದಲೇ ಮೈಸೂರು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ಪೊಲೀಸರು ಬರಡನಪುರ ನಾಗರಾಜ್, ಬನ್ನೂರ್ ಪೊಲೀಸ್ ಠಾಣೆ ಪೊಲೀಸರು ಅತ್ತಳ್ಳಿ ದೇವರಾಜ್, ತಿ.ನರಸೀಪುರ ಪೊಲೀಸ್ ಠಾಣೆ ಕಿರುಗಸೂರು ಶಂಕರ್ ,ಕುರುಬೂರು ಸಿದ್ದೇಶ್, ಪ್ರಸಾದ್ ನಾಯ್ಕ್, ಅಪ್ಪಣ್ಣ, ನಿಂಗರಾಜ್, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಲಿನ ನಾಗರಾಜ್ ಅವರನ್ನು ಆಯಾ ತಾಲ್ಲೂಕುಗಳಲ್ಲಿ ಮುಂಜಾಗ್ರತಾ ಕ್ರಮ ಎಂದು ಪೊಲೀಸರು ಬಂಧಿಸಿದ್ದಾರೆ. ಸರ್ಕಾರ ರೈತರ ಚಳುವಳಿ ದಮನ ಮಾಡಲು ಪೊಲೀಸ್ ಇಲಾಖೆ ಮೂಲಕ ಯತ್ನಿಸುತ್ತಿದೆ. ಯಾತಕ್ಕಾಗಿ ಬಂಧನ ಎಂಬುದಕ್ಕೆ ಪೊಲೀಸರು ಸಮರ್ಪಕ ಉತ್ತರ ನೀಡುತ್ತಿಲ್ಲ. ಇದು ದಬ್ಬಾಳಿಕೆಯ ವರ್ತನೆ. ಕೂಡಲೇ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ರಸ್ತೆ ತಡೆ ಚಳುವಳಿಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜಕೀಯ ಬದಿಗೊತ್ತಿ ರೈತರ ಸಮಸ್ಯೆ ಬಗೆಹರಿಸಿ: ರಾಜ್ಯದ ರೈತರು ಬರಗಾಲದ ಸಂಕಷ್ಟದಲ್ಲಿದ್ದು, ಸಾಲ ತೆಗೆದುಕೊಂಡು ಬೆಳೆ ಬೆಳೆಯಲು ಹೂಡಿಕೆ ಮಾಡಿರುವ ಕಾರಣ ಯಾವುದೇ ಬ್ಯಾಂಕಿನ ಸಹಕಾರ ಸಂಘದ ಸಾಲ ವಾಪಸ್ ತುಂಬಲು ಸಾಧ್ಯವಿಲ್ಲ. ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಹೊಸ ಸಾಲ ಕೊಟ್ಟರೆ ಮಾತ್ರ ಆಹಾರ ಉತ್ಪಾದನೆ ಸಾಧ್ಯ ಎಂಬುದನ್ನು ಅರಿಯಲಿ. ಕೈಗಾರಿಕೆ ಉದ್ದಿಮೆಗಳಿಗೆ ಸಂಕಷ್ಟ ಕಾಲದಲ್ಲಿ ಸಾಲ ಮನ್ನಾ ಮಾಡಿ ಸಂಕಷ್ಟ ನೆರವು ನೀಡುವ ರೀತಿಯಲ್ಲಿ ರೈತರಿಗೂ ನೆರವು ನೀಡಬೇಕು. ರಾಜ್ಯ ಸರಕಾರ 220 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ಕೇಂದ್ರ ಸರಕಾರವನ್ನು ಟೀಕಿಸುತ್ತಾ ಕುಳಿತರೆ ರೈತರ ಕಷ್ಟ ನಿವಾರಣೆಯಾಗುವುದಿಲ್ಲ. ರಾಜಕೀಯ ಬದಿಗೊತ್ತಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಕಳೆದು 2200 ರೂ., ಕೊಡುತ್ತಿದ್ದಾರೆ. ಈ ಕಾರ್ಖಾನೆಗೆ ವರುಣ ಕ್ಷೇತ್ರದ ಸುಮಾರು 25 ಸಾವಿರ ರೈತರು ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಜಿಲ್ಲಾ ಮಂತ್ರಿ ಹೆಚ್.ಸಿ.ಮಹದೇವಪ್ಪ ಕ್ಷೇತ್ರದಲ್ಲಿ 25000 ಕಬ್ಬು ಬೆಳೆಗಾರರು ಈ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಕ್ಷೇತ್ರದ ಜನಪ್ರತಿನಿಧಿಯಾಗಿ ನ್ಯಾಯ ಕೊಡಿಸುವ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ನಾವು ರೈತರ ಪರ ಎಂದು ಹೇಳುವ ಇವರಿಗೆ ರೈತರು ಮಾಡಿರುವ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.
ನಾನು ರೈತ ಸಂಘದ ಹೋರಾಟಗಾರನಾಗಿದ್ದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹೋರಾಟಕ್ಕೆ ಆಸ್ಪದ ನೀಡದೆ ಬಂಧನ ಮಾಡಿಸಿದ್ದು, ಶೋಭೆ ತರುವಂತದ್ದಲ್ಲ. ನ. 9ರಂದು ಸಿಎಂ ಸಿದ್ದರಾಮಯ್ಯನವರ ಮನೆ ಮುಂದೆ ಕಬ್ಬು ಬೆಳೆಗಾರ ರೈತರು ಧರಣಿ ನಡೆಸಲು ಆಸ್ಪದ ನೀಡದೇ ಬಂಧನ ಮಾಡಿದ ಪೊಲೀಸ್ ವರ್ತನೆ ಖಂಡನೀಯ. ಮುಖ್ಯಮಂತ್ರಿಗಳ ಮುಂದಿನ ಪ್ರವಾಸದ ವೇಳೆ, ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ರೈತರಿಗೆ ಭರವಸೆ ನೀಡಿದ್ದಾರೆ. ಸಿಎಂ ಕ್ಷೇತ್ರದ ಸಮಸ್ಯೆಯಾಗಿರುವ ಕಾರಣ ಸಮಸ್ಯೆ ಬಗೆಹರಿಸಲು, ಜಿಲ್ಲಾ ಮಂತ್ರಿಗಳು ವಿಶೇಷ ಗಮನಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ರೈತರ ಗಂಭೀರ ಹೋರಾಟ ಎದುರಿಸಬೇಕಾಗುತ್ತದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2023- 24 ನೇ ಸಾಲಿಗೆ ಕಬ್ಬಿನ ಎಆರ್ಪಿ ದರಕ್ಕಿಂತ ಹೆಚ್ಚುರಿಯಾಗಿ ದರ ನೀಡಲು ಒಪ್ಪಿ ರೈತರಿಂದ ಕಬ್ಬು ಖರೀದಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಕಬ್ಬು ದರದ ವಿವರಣೆ ನೀಡಿದ ಶಾಂತಕುಮಾರ್, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ, ಕಳೆದ ವರ್ಷ ಡಿಸೆಂಬರ್ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ,ಕಬ್ಬು ಬೆಳೆಗಾರರಿಗೆ ಉತ್ಪಾದನಾ ವೆಚ್ಚವು ಸಿಗುತ್ತಿಲ್ಲ. ಟನ್ಗೆ 4500 ರೂ. ನಿಗದಿ ಮಾಡಬೇಕು ಎಂದು ಸುದೀರ್ಘ ಭಾಷಣ ಮಾಡಿದರು. ಇದೀಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ, ಬೊಮ್ಮಾಯಿ, ಸೋಮಣ್ಣ