ಮೈಸೂರು: ಕೃಷಿ ಇಲಾಖೆಯಲ್ಲಿ ಮೇಲಿನಿಂದ ಕೆಳಗಿನವರೆಗೆ ಮಾಮೂಲಿ ಫಿಕ್ಸ್ ಆಗಿದೆ. ವರ್ಗಾವಣೆ ಬೇಡ ಎನ್ನುವರು ಇಂತಿಷ್ಟು ಹಣ ನಿಡಬೇಕೆಂಬುದು ಇಲಾಖೆಯಲ್ಲಿ ಫಿಕ್ಸ್ ಆಗಿರುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕೃಷಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೃಷಿ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್ ಇಂದು ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ಎಲ್ಲಾ ರೈತಪರ ಸಂಘಟನೆಗಳಿಂದ ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವ ಬಗ್ಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕೃಷಿ ಸಚಿವರು ರೈತರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಇಂತಿಷ್ಟು ಎಂದು ಮಾಮೂಲಿ ನಿಗದಿಯಾಗಿರುತ್ತದೆ. ಅದರಂತೆ ಹಣ ನೀಡಬೇಕು. ಇಲ್ಲದಿದ್ದರೆ ವರ್ಗಾವಣೆ ಖಚಿತ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಿಎಂಗೆ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಮಗೆ ಸಹ ಕಳುಹಿಸಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ:ಪತ್ರಕರ್ತರ ಹೆಸರಿನಲ್ಲಿ ವೈದ್ಯರಿಗೆ ಬ್ಲ್ಯಾಕ್ಮೇಲ್: ಮೈಸೂರಲ್ಲಿ ಮೂವರು ಯುವತಿಯರ ಬಂಧನ
ಇನ್ನು ಕೃಷಿ ವಿವಿಯ ಪ್ರೊಫೆಸರ್ಗಳಿಗೂ ಮಾಮೂಲಿ ನೀಡಬೇಕೆಂದು ಕೇಳಿದ್ದಾರೆ. ಅದರಿಂದ ನಮ್ಮನ್ನು ರಕ್ಷಿಸಿ ಎಂದು ಪ್ರೊಫೆಸರ್ಗಳು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಹಾಗಾಗಿ ಕೃಷಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಸಿಎಂ ಗಮನಹರಿಸಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.