ಮೈಸೂರು: ಕೇಂದ್ರ ಆದೇಶದಂತೆ ರಾಜ್ಯ ಸರ್ಕಾರ ಬಲವಂತವಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದು, ರೈತರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತನ್ನ ನಿಯಂತ್ರಣದಲ್ಲಿ ಇದ್ದಾಗಲೇ ಸರಿಯಾಗಿ ನಿಯಂತ್ರಿಸದ ಸರ್ಕಾರ, ಖಾಸಗಿಯವರ ಕೈಗೆ ಕೊಟ್ಟು ನಿಯಂತ್ರಣ ಮಾಡುವುದು ಸಾಧ್ಯವಿಲ್ಲ. ಕಾರ್ಪೊರೇಟ್ ಒತ್ತಾಸೆಗೆ ಮಣಿದು ಈ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ. ಇದರಲ್ಲಿ ಯಾವುದೇ ರೈತರ ಹಿತಾಶಕ್ತಿ ಇಲ್ಲ. ನಾವು ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಇನ್ನೆರಡು ದಿನಗಳಲ್ಲಿ ಹಲವು ಸಂಘಟನೆಗಳ ಜೊತೆಗೂಡಿ ಬೀದಿಗಿಳಿಯಲಿದ್ದೇವೆ ಎಂದರು.