ಮೈಸೂರು: ಕೃಷಿ ಕಾಯ್ದೆಗಳನ್ನು ರೈತರ ಜೊತೆ ಮಾತಾಡಿ ಜಾರಿಗೆ ತರುತ್ತಿದ್ದೇವೆ ಎಂದು ರಾಜ್ಯಸಭೆಯಲ್ಲಿ ಹೇಳಿದ ಪ್ರಧಾನಿ ಮೋದಿ ಮತ್ತೆ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರ ಜೊತೆ ಮುಂಚೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಈವಾಗಲು ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ. ಆದರೆ ರೈತರು ಬರುವ ಹಾದಿಗೆ ಕಬ್ಬಿಣದ ಸಲಾಕೆ ಹೊಡೆಸಿದ್ದಾರೆ. ಮುಳ್ಳಿನ ತಂತಿ ಬೇಲಿ ಹಾಕಿ ಹಿಂಸಿಸಿದ್ದಾರೆ. ಮಾತುಕತೆಗೆ ಸಿದ್ಧವಿರುವವರು ಈಗಿರುವ ಮುಳ್ಳನ್ನು ಮತ್ತು ತಂತಿಯನ್ನು ತೆರವುಗೊಳಿಸಿ, ದಾರಿಯನ್ನ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಬಡಗಲಪುರ ನಾಗೇಂದ್ರ ಪ್ರತಿಕ್ರಿಯೆ ಎಂ ಎಸ್ ಪಿ ಈಗಿನದಲ್ಲ, ಹಿಂದಿನಿಂದಲೂ ಜಾರಿಯಲ್ಲಿದೆ. ಎಂ ಎಸ್ ಪಿ ಯನ್ನು ಮುಂದುವರಿಸಿದರಷ್ಟೇ ಸಾಲದು. ನಾವು ಕೇಳುತ್ತಿರುವುದು ಎಂ ಎಸ್ ಪಿಗೆ ಕಾನೂನಾತ್ಮಕ ರಕ್ಷಣೆ ನೀಡಿ ಅಂತ. ಮನಮೋಹನ್ ಸಿಂಗ್ ಮೌನವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅದನ್ನು ಕೇಳಲಿ ನಮ್ಮ ಅಭ್ಯಂತರ ಇಲ್ಲ. ಆದರೆ ನಾವು ನರೇಂದ್ರ ಮೋದಿ ಅವರನ್ನು ಪ್ರಶ್ನಿಸುತ್ತಿದ್ದೇವೆ. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೃಷಿ ಉತ್ಪನ್ನಗಳಿಗೆ ಎಂ .ಎಸ್. ಪಿ ಯನ್ನು ಶಾಸನಾತ್ಮಕವಾಗಿ ರೂಪಿಸಬೇಕೆಂದು ನಿರ್ಣಯವನ್ನು ಮಾಡಿ ಅಂದಿನ ಪ್ರಧಾನ ಮಂತ್ರಿಯಾದ ಮನಮೋಹನ್ ಸಿಂಗ್ ರನ್ನು ಒತ್ತಾಯಿಸಿದಿರಿ ಇಗೇಕೆ ಆ ನಿಲುವಿನ ವಿರುದ್ಧವಾಗಿ ಇದ್ದೀರಿ ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.
ಓದಿ : ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ... ಹೊರಟ್ಟಿ ಬೆಂಬಲಿಸಲು ಬಿಜೆಪಿ ಸದಸ್ಯರಿಗೆ ಸಿಎಂ ಸೂಚನೆ
ಕೃಷಿ ಸಂಬಂಧಿತ ಕಾಯ್ದೆಗಳನ್ನು ಅಂದಿನ ಕಾನೂನು ಸಚಿವ ಕಪಿಲ್ ಸಿಬಲ್ ಅವರು ಮಂಡಿಸಿದಾಗ, ಲೋಕಸಭೆಯ ಪ್ರತಿಪಕ್ಷದ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ತೀವ್ರವಾಗಿ ವಿರೋಧಿಸಿದರು. ರಾಜ್ಯಸಭೆಯಲ್ಲಿ ಕೂಡ ಅರುಣ್ ಜೇಟ್ಲಿ ಬಲವಾಗಿ ವಿರೋಧಿಸಿದ್ದರು. ಆದರೆ ರೈತರು ಇಂದು ಏನು ಹೇಳುತ್ತಿದ್ದೇವೆ ಅದಕ್ಕಿಂತಲೂ ಚೆನ್ನಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮಾಡಿದ್ದರು. ಅಂದು ವಿರೋಧಿಸಿದ ತಮ್ಮ ಪಕ್ಷ ಅದೇ ಕಾನೂನುಗಳನ್ನು ಯಾಕೆ ಜಾರಿಗೆ ತರಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ನಾಗೇಂದ್ರ ಒತ್ತಾಯಿಸಿದ್ದಾರೆ.
ನರೇಂದ್ರ ಮೋದಿ ಅವರೇ, ಗಾಂಧಿ ಹುಟ್ಟಿದ ನಾಡಿನಲ್ಲಿ ಜನಿಸಿರುವ ತಾವು ಮಹಾತ್ಮ ಗಾಂಧಿಗೆ ಅಪಚಾರ ಮಾಡುತ್ತಿದ್ದೀರಿ. ಅಂಬೇಡ್ಕರವರ ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಿರಾ. ಅಂದಿನ ಬ್ರಿಟಿಷ್ ಸರ್ಕಾರವು ಕೂಡ ಸತ್ಯಾಗ್ರಹಗಳನ್ನು ಗೌರವಿಸಿತ್ತು. ಆದರೆ, ತಾವು ಬ್ರಿಟಿಷ್ ಸರ್ಕಾರಕ್ಕಿಂತ ಕೆಟ್ಟದಾಗಿ ನಡೆದುಕೊಳ್ಳುತಿದ್ದಿರಿ. ನರೇಂದ್ರ ಮೋದಿ ಅವರೇ ನೀವು ಸುಳ್ಳುಗಳನ್ನು ಹೇಳಲು ಮುಜುಗರ ಆಗುವುದಿಲ್ಲವೆ? ನಾಚಿಕೆ ಆಗುವುದಿಲ್ಲವೇ? ಸುಳ್ಳುಗಳನ್ನು ಹೇಳುವುದನ್ನು ನಿಲ್ಲಿಸಿ ಪ್ರಧಾನ ಮಂತ್ರಿ ಹುದ್ದೆಯ ಘನತೆ ಮತ್ತು ಗೌರವವನ್ನು ಉಳಿಸಿ ಎಂದು ಕಿಡಿಕಾರಿದ್ದಾರೆ.
ನಿಮ್ಮ ಸುಳ್ಳುಗಳನ್ನು ಕೇಳಿ ಕೇಳಿ ಭಾರತದ ಜನರಿಗೆ ವಾಕರಿಕೆಯಾಗಿದೆ. ಮತ್ತೆ ಯಾರು ನಿಮ್ಮನ್ನು ನಂಬುವವರು ಇಲ್ಲ, ರೈತರ ಬಗ್ಗೆ ಮಾತನಾಡಿದರೆ ಸಾಲದು ಕೃಷಿ ಮಸೂದೆಗಳನ್ನು ವಾಪಸ್ ಪಡೆದು ಅವರ ಬದುಕನ್ನು ಹಸನು ಮಾಡಲು ಪ್ರಾಮಾಣಿಕ ಪ್ರಯತ್ನಿಸಿ. ಈ ಮೂಲಕ ಭಾರತದ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.